ಶಿರಹಟ್ಟಿ ತಹಸೀಲ್ದಾರ ಕಚೇರಿಗೆ ಲೋಕಾಯುಕ್ತ ಡಿಎಸ್‌ಪಿ ಬಿರಾದಾರ ಭೇಟಿ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶುಕ್ರವಾರ ಬೆಳಿಗ್ಗೆ ಗದಗ ಲೋಕಾಯುಕ್ತ ಡಿಎಸ್‌ಪಿ ವಿಜಯಕುಮಾರ ಬಿರಾದಾರ ಮತ್ತು ತಂಡ ಶಿರಹಟ್ಟಿ ತಹಸೀಲ್ದಾರ ಕಚೇರಿಗೆ ಭೇಟಿ ನೀಡಿ ವಿವಿಧ ಶಾಖೆಗಳಲ್ಲಿಯ ಕೆಲಸ-ಕಾರ್ಯಗಳನ್ನು ಸಂಜೆ 4.30ರವರೆಗೂ ಪರಿಶೀಲನೆ ನಡೆಸಿದರು.

Advertisement

ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆಯ ಸಮಯದಲ್ಲಿ ಅಟಲ್‌ಜೀ ಕೇಂದ್ರದಲ್ಲಿರುವ ಬೆಳೆ ದೃಢೀಕರಣ ಪತ್ರ ನೀಡುವ ಅರ್ಜಿಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ರೈತರ ಉತಾರದಲ್ಲಿರುವ ಬೆಳೆಯ ಬದಲಾಗಿ ಬೆಳೆ ದೃಢೀಕರಣ ಪತ್ರದಲ್ಲಿ ಬೇರೆ ಬೆಳೆಯನ್ನು ನಮೂದಿಸಿದ್ದು ಕಂಡುಬಂದಿದ್ದರಿಂದ ಅನೇಕ ಅರ್ಜಿಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ವೇಳೆ ರೈತರ ಜಮೀನಿನಲ್ಲಿಯ ಜಿಪಿಎಸ್ ಫೋಟೋ ಇರದೇ ಇರುವುದು, ಒಂದೇ ಫೋಟೋವನ್ನು 2-3 ರೈತರ ಉತಾರಗಳ ಜಮೀನುಗಳ ಅರ್ಜಿಗೆ ಲಗತ್ತಿಸಿರುವುದು ಕಂಡು ಬಂದಿತು. ಈ ಬಗ್ಗೆ ಶಾಖೆಯನ್ನು ನಿರ್ವಹಿಸುವ ಸಿಬ್ಬಂದಿಗಳನ್ನು ಕೇಳಿದಾಗ, ಗ್ರಾಮ ಲೆಕ್ಕಾಧಿಕಾರಿಗಳ ವರದಿ ಆಧಾರದ ಮೇಲೆ ಬೆಳೆ ದೃಢೀಕರಣ ಪತ್ರ ನೀಡಲಾಗುತ್ತಿದೆ ಎಂದರು. ಇದಕ್ಕೆ ಲೋಕಾಯುಕ್ತ ಅಧಿಕಾರಿಗಳು ಸ್ಥಳ ಪರಿಶೀಲನೆ ಇಲ್ಲದೇ, ಜಿಪಿಎಸ್ ಫೋಟೋ ಇಲ್ಲದೇ ಪ್ರಮಾಣ ಪತ್ರ ನೀಡುವುದರಿಂದ ನಿಜವಾದ ರೈತರಿಗೆ ಅನ್ಯಾಯವಾಗುತ್ತದೆ. ಇದನ್ನು ಸರಿಪಡಿಸಿಕೊಳ್ಳದಿದ್ದರೆ ಶಿಸ್ತು ಕ್ರಮಕ್ಕೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.

ವೃದ್ಧಾಪ್ಯ ವೇತನಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿದಾಗ, ಅಲ್ಲಿಯೂ ವಯಸ್ಸಿನ ದಾಖಲಾತಿ ತಿದ್ದುಪಡಿಯಾಗಿದೆ ಎಂದು ಗ್ರಾಮಲೆಕ್ಕಾಧಿಕಾರಿ ಅನೇಕ ಅರ್ಜಿಗಳನ್ನು ರದ್ದುಗೊಳಿಸಿದ್ದು, ದಾಖಲೆ ಪರಿಶೀಲಿಸಿದಾಗ ತಿದ್ದುಪಡಿಯಾಗಿರುವುದು ಕಂಡು ಬರುತ್ತಿಲ್ಲ. ಇನ್ನೂ ಕೆಲವರು ಅರ್ಹತೆ ಇದ್ದರೂ ಸಹ ಅಂಥವರ ಅರ್ಜಿಗಳನ್ನು ರದ್ದುಗೊಳಿಸಿದ್ದಾರೆ. ಇದರಿಂದ ಸರಕಾರದ ಸೌಲಭ್ಯದಿಂದ ಅನೇಕರು ವಂಚಿತರಾಗುತ್ತಿದ್ದಾರೆ ಎಂದು ಸಿಬ್ಬಂದಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡರು.

ಭೂಮಿ ಕೇಂದ್ರದಲ್ಲಿ ಖಾತೆ ಬದಲಾವಣೆ ಸಮಯದಲ್ಲಿ ಕಡ್ಡಾಯವಾಗಿ ಜೆ-ಫಾರ್ಮ್ಗೆ ಆಕ್ಷೇಪಣೆಗಳೇನಾದರೂ ಇದ್ದರೆ ಅದಕ್ಕೆ ಸಂಬಂಧಿಸಿದವರಿಗೆ ನೋಟೀಸ್ ಜಾರಿ ಮಾಡುವುದು ನಿಯಮ. ಆದರೆ ಇಲ್ಲಿ ನೋಟೀಸ್ ಜಾರಿ ಮಾಡದೇ ಇರುವುದು ಕಂಡು ಬಂದಿತು. ಈ ಬಗ್ಗೆಯೂ ಸಹ ಸಂಬಂಧಿಸಿದ ಶಿರಸ್ತೇದಾರ ಮತ್ತು ಸಿಬ್ಬಂದಿಗೆ ಈ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳುವಂತೆ ಲೋಕಾಯುಕ್ತ ಅಧಿಕಾರಿಗಳು ಸೂಚನೆ ನೀಡಿದರು.

ಗದಗ ಲೋಕಾಯುಕ್ತ ಇನ್ಸಪೆಕ್ಟರ್ ಪರಮೇಶ್ವರ ಕವಟಗಿ, ಉಮೇಶ ಸಂಗನಾಳ, ನೀಲಕಂಠಪ್ಪ ಜವಳಿ, ಹಸನ್ ಡಿ, ಮಂಜುನಾಥ ದಿಗಡೂರ ಉಪಸ್ಥಿತರಿದ್ದರು.

ಲೋಕಾಯುಕ್ತ ಅಧಿಕಾರಿಗಳ ತಂಡ ವಿವಿಧ ಶಾಖೆಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಂತೆ ಮಾಹಿತಿ ನೀಡುವಲ್ಲಿ ವಿವಿಧ ಶಾಖೆಗಳ ಸಿಬ್ಬಂದಿಗಳು ತಡವರಿಸಿದರು. ಸರಿಯಾಗಿ ರಜಿಸ್ಟರ್ ನಿರ್ವಹಣೆ ಮಾಡದೇ ಇರುವವರಿಗೆ, ತಮ್ಮ ಕೆಲಸ-ಕಾರ್ಯದ ಬಗ್ಗೆ ಮಾಹಿತಿ ಇಲ್ಲದ ಸಿಬ್ಬಂದಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಿದರು.


Spread the love

LEAVE A REPLY

Please enter your comment!
Please enter your name here