ಜೀ ಕನ್ನಡ ವಾಹಿನಿಯ ಖ್ಯಾತ ರಿಯಾಲಿಟಿ ಶೋ ಸರಿಗಮಪದ ಗಾಯಕಿಯಾಗಿ ಮಿಂಚಿರುವ, ಕನ್ನಡದ ಯುವ ಗಾಯಕಿ ಪೃಥ್ವಿ ಭಟ್ ಮನೆಯವರ ವಿರೋಧದ ನಡುವೆ ಕಳೆದ ಎರಡೂವರೆ ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಮದುವೆಯಾಗಿ ಎರಡೂವರೆ ತಿಂಗಳ ಬಳಿಕ ಜೋಡಿ ಅದ್ದೂರಿಯಾಗಿ ಆರತಕ್ಷತೆ ಮಾಡಿಕೊಂಡಿದ್ದಾರೆ.
ಕಳೆದ ಮಾರ್ಚ್ 27ರಂದು ದೇವಸ್ಥಾನವೊಂದರಲ್ಲಿ ಪೃಥ್ವಿ ಭಟ್ ಹಾಗೂ ಅಭಿಷೇಕ್ ಅವರು ಮದುವೆಯಾಗಿದ್ದರು. ಮಗಳು ಮದುವೆಯಾದ ಸುದ್ದಿ ತಿಳಿದು ಪೃಥ್ವಿ ಭಟ್ ತಂದೆ ಸಾಕಷ್ಟು ಆರೋಪ ಮಾಡಿದ್ದರು. ಇದೀಗ ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಸರಿಗಮಪದ ಗಾಯಕರು, ಜಡ್ಜ್‌ಗಳು, ಹಾಗೂ ಜೀ ಕನ್ನಡದ ಸಿಬ್ಬಂದಿಗಳು ಭಾಗಿಯಾಗಿದ್ದರು.
ಗಾಯಕಿ ಪೃಥ್ವಿ ಭಟ್ ತಮ್ಮ ಆರತಕ್ಷತೆಯ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪತಿ ಅಭಿಷೇಕ್ ಅವರಿಗೆ ಮೇಕಪ್ ಮಾಡುತ್ತಿರುವ ವಿಡಿಯೋ ಕೂಡ ಇದೆ. ಇನ್ನೂ ಆರತಕ್ಷತೆ ಕಾರ್ಯಕ್ರಮದಲ್ಲಿ ಗಾಯಕ ವಿಜಯ್ ಪ್ರಕಾಶ್, ಪತ್ನಿ ಮಹತಿ ಹಾಗೂ ಪುತ್ರಿ ಭಾಗಿಯಾಗಿದ್ದರು.ರಿಯಾಲಿಟಿ ಶೋ ನಿರೂಪಕಿ ಅನುಶ್ರೀ ಕೂಡ ಆಗಮಿಸಿ ನವ ಜೋಡಿಗೆ ಶುಭವನ್ನು ಕೋರಿದ್ದಾರೆ. ನಾದ ಬ್ರಹ್ಮ ಹಂಸಲೇಖ ಅವರ ಪತ್ನಿ ಕೂಡ ಭಾಗವಹಿಸಿದ್ದಾರೆ. ನಟ ಒಳ್ಳೆ ಹುಡುಗ ಪ್ರಥಮ್, ಗಾಯಕ ಸುನೀಲ್, ಬಿಗ್ ಬಾಸ್ ವಿನ್ನರ್ ಹನುಮಂತು, ಖ್ಯಾತ ಗಾಯಕ ಹೇಮಂತ್, ನಟಿ ಮೋಕ್ಷಿತಾ ಪೈ, ಸೇರಿದಂತೆ ಇನ್ನೂ ಹಲವರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.
ಈ ಹಿಂದೆ ಪೃಥ್ವಿ ಭಟ್ ತಂದೆ ನನ್ನ ಮಗಳನ್ನು ವಶೀಕರಣ ಮಾಡಿ ಮದುವೆ ಮಾಡಲಾಗಿದೆ ಆರೋಪ ಮಾಡಿದ್ದರು. ಸಂಗೀತ ಪಾಠ ಹೇಳಿಕೊಡುವ ನರಹರಿ ದೀಕ್ಷಿತ್ ಇದಕ್ಕೆಲ್ಲ ಕಾರಣ ಎಂದು ಅವರು ಆರೋಪ ಮಾಡಿದ್ದರು. ಈ ಬಗ್ಗೆ ಖುದ್ದು ನರಹರಿ ದೀಕ್ಷಿತ್ ಅವರು ಪ್ರತಿಕ್ರಿಯಿಸಿ, ಎರಡೂವರೆ ವರ್ಷದಿಂದ ಅಭಿಷೇಕ್, ಪೃಥ್ವಿಯನ್ನು ಪ್ರೀತಿ ಮಾಡುತ್ತಿದ್ದ. ಇದು ನಮಗೆ ಗೊತ್ತಾದಾಗ ನಾನೇ ಪೃಥ್ವಿ ಮನೆಗೆ ಹೋಗಿ ತಂದೆ ಬಳಿ ಮಾತನಾಡಿದ್ದೇನೆ.
ಇನ್ನೊಂದು ಹುಡುಗನನ್ನು ನೋಡಿ ಪೃಥ್ವಿ ನಿಶ್ಚಿತಾರ್ಥ ಮಾಡಲು ರೆಡಿಯಾದಾಗ ಪೃಥ್ವಿ ಈ ರೀತಿ ಮಾಡಿದ್ದಾಳೆ. ಪೃಥ್ವಿ ಮದುವೆ ಆಗುವ ದಿನವೇ ಅವಳು ಫೋನ್ ಮಾಡಿ ಅರ್ಜೆಂಟ್ ಇಲ್ಲಿಗೆ ಬನ್ನಿ ಸರ್ ಅಂತ ಹೇಳಿದಳು. ನಾನು ಹೋದಮೇಲೆ ಮದುವೆ ಆಗಿತ್ತು. ಅಕ್ಷತೆ ಕಾಳು ಹಾಕಿ ಬಂದೆ ಎಂದು ಹೇಳಿದ್ದರು.