ಕೆಜಿಎಫ್ ಬಳಿಕ ರಾಕಿಂಗ್ ಸ್ಟಾರ್ ಯಶ್ ಅವರು ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಎರಡು ಸಿನಿಮಾಗಳು ಬಿಗ್ ಬಜೆಟ್ ಸಿನಿಮಾಗಳಾಗಿದ್ದು ಮೊದಲು ಟಾಕ್ಸಿಕ್ ಸಿನಿಮಾ ರಿಲೀಸ್ ಆಗಲಿದೆ. ಜೊತೆಗೆ ರಾಮಾಯಣ ಸಿನಿಮಾದ ಶೂಟಿಂಗ್ ಕೂಡ ಆರಂಭವಾಗಿದ್ದು ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ ಯಶ್ ಅವರ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ಖ್ಯಾತ ನಟಿ ಕಾಜಲ್ ಅಗರ್ವಾಲ್ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು ಬಹುನಿರೀಕ್ಷಿತ ರಾಮಾಯಣ ಸಿನಿಮಾದಲ್ಲಿ ಯಶ್ ರಾವಣನ ಪಾತ್ರ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಾವಣನ ಪತ್ನಿ ಮಂಡೋದರಿಯ ಪಾತ್ರದಲ್ಲಿ ಖ್ಯಾತ ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿ ಕೇಳಿ ಬಂದಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಿಲ್ಲ.
ಸಲ್ಮಾನ್ ಖಾನ್ ನಟನೆಯ “ಸಿಕಂದರ್” ಸಿನಿಮಾ ಬಳಿಕ ನಟಿ ಕಾಜಲ್ ಅಗರ್ವಾಲ್ ನಿತೇಶ್ ತಿವಾರಿ ಅವರ “ರಾಮಾಯಣ” ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಕಾಜಲ್ ಮಂಡೋದರಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ರಾವಣನ ಪಾತ್ರವನ್ನು ನಿರ್ವಹಿಸುವ ನಟ ಯಶ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ಹಿಂದೆ ನಟಿ ಸಾಕ್ಷಿ ತನ್ವರ್ ಮಂಡೋದರಿ ಪಾತ್ರ ಮಾಡಲಿದ್ದಾರೆ ಎಂದು ಎಂದು ಹೇಳಲಾಗಿತ್ತು. ಆದರೆ ಮೂಲಗಳ ಪ್ರಕಾರ ಮಂಡೋದರಿ ಪಾತ್ರಕ್ಕೆ ಕಾಜಲ್ ಅಗರ್ವಾಲ್ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
‘ರಾಮಾಯಣ’ ಸಿನಿಮಾವನ್ನು ಎರಡು ಭಾಗಗಳಲ್ಲಿ ತರೋದಾಗಿ ಈಗಾಗಲೇ ಚಿತ್ರತಂಡ ತಿಳಿಸಿದೆ. 2026ರಲ್ಲಿ ಸಿನಿಮಾ ರಿಲೀಸ್ ಆಗಲಿದೆ.