ವಿಜಯಸಾಕ್ಷಿ ಸುದ್ದಿ, ಗದಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (IಅಆS) ಯಲ್ಲಿ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಗ್ರಾಚ್ಯುಟಿ ಪಾವತಿ ಕಾಯ್ದೆ 1972ರ ಅಡಿಯಲ್ಲಿ ಗ್ರಾಚ್ಯುಟಿ (ನಿವೃತ್ತಿ ಉಪಧನ) ಪಡೆಯಲು ಅರ್ಹರು ಎಂಬುದಾಗಿ ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ತೀರ್ಪನ್ನು ನೀಡಿದೆ. ಆದರೂ, ರಾಜ್ಯ ಸರ್ಕಾರ ಇದೂವರೆಗೂ ನಮಗೆ ಗ್ರಾಚ್ಯುಟಿ ವೇತನ ನೀಡಿಲ್ಲ. ಕೂಡಲೇ 2011-12ರಿಂದ ನಿವೃತ್ತಿ ಹೊಂದಿದ ಸಹಾಯಕರಿಗೆ ನಿವೃತ್ತಿ ಉಪಧನ ನೀಡಬೇಕೆಂದು ಸಂಘದ ಜಿಲ್ಲಾಧ್ಯಕ್ಷೆ ಎಸ್.ಎಸ್. ಕಲ್ಲಳ್ಳಿ ಆಗ್ರಹಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2022ರ ಎಪ್ರಿಲ್ 25ರಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ಅಜಯ್ ರೆಸೂಗಿ ಮತ್ತು ಅಭಯ್ ಎಸ್.ಓಕಾ ಅವರ ನೇತೃತ್ವದ ನ್ಯಾಯಪೀಠವು ಅಂಗನವಾಡಿ ನೌಕರರ ಕೆಲಸ-ಕಾರ್ಯಗಳನ್ನು ಸೂಕ್ಷö್ಮವಾಗಿ ಗಮನಿಸಿ ಅವರ ಕೆಲಸವು ಅರೆಕಾಲಿಕವಲ್ಲ, ಅಂಗನವಾಡಿ ನೌಕರರು ಪೂರ್ಣ ಸಮಯದ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆಂಬುದನ್ನು ಒತ್ತಿ ಹೇಳಿದ್ದಾರೆ. ಆದರೂ, ಸರ್ಕಾರ ನಮ್ಮ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಿಯಮಿತವಾದ ಸಂಬಳ ಮತ್ತಿತರ ಸವಲತ್ತುಗಳಿಂದಲೂ ವಂಚಿತರಾಗಿದ್ದಾರೆ. ಅವರು ನಿರ್ವಹಿಸುವ ಕೆಲಸ ಶಾಸನಬದ್ಧವಾಗಿದ್ದರೂ ಸಹ ಅದನ್ನು ನಾಗರಿಕ ಸೇವೆಯೆಂದಾಗಲಿ ಅಥವಾ ನಾಗರಿಕ ಹುದ್ದೆ ಎಂಬುದಾಗಿಯೂ ಪರಿಗಣಿಸಿಲ್ಲ. ಕನಿಷ್ಠ ವೇತನಕ್ಕಿಂತ ಕಡಿಮೆ ಗೌರವಧನದಲ್ಲಿ ದುಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ಸರ್ವೋಚ್ಛ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಗಂಭೀರವಾಗಿ ಉಲ್ಲೇಖಿಸಿದೆ.
ಅಂಗನವಾಡಿ ನೌಕರರು ಪಡೆಯುವ ಗೌರವಧನವು ಕೂಡಾ ವೇತನದ ವ್ಯಾಖ್ಯಾನಕ್ಕೆ ಒಳಪಡುವುದರಿಂದ ವೇತನಕ್ಕಾಗಿಯೇ ನೇಮಕಗೊಂಡಿರುವ ಅಂಗನವಾಡಿಗಳ ಕಾರ್ಯಕರ್ತೆ ಮತ್ತು ಸಹಾಯಕಿಯರು 1972ರ ಗ್ರಾಚ್ಯುಟಿ ಪಾವತಿ ಕಾಯಿದೆಯ ಪ್ರಕಾರ ಅವರು ನೌಕರರಾಗಿರುತ್ತಾರೆ ಎಂದು ಸರ್ವೋಚ್ಛ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಸ್ಪಷ್ಟೀಕರಿಸಿದೆ ಎಂದು ಹೇಳಿದರು.
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸುಮಾರು 50 ವರ್ಷಗಳಿಂದ ಸೇವೆ ಸಲ್ಲಿಸಿ ಇಂದು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಹಲವರು ಕಾಯಿಲೆಗಳಿಂದ ಬಳಲುತ್ತಿದ್ದು, ಆರ್ಥಿಕವಾಗಿ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಇನ್ನೂ ಹಲವರು ತಮ್ಮ ಇಳಿ ವಯಸ್ಸಿನಲ್ಲಿ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ. ಇಷ್ಟೆಲ್ಲಾ ಸಂಕಷ್ಟದ ಪರಿಸ್ಥಿತಿ ಇದ್ದರೂ ರಾಜ್ಯ ಸರ್ಕಾರ ಮಾತ್ರ ಕಣ್ಣು ತೆರೆದು ನೋಡುತ್ತಿಲ್ಲ. ಕೂಡಲೇ ನಮ್ಮ ನಿವೃತ್ತಿ ಉಪಧನ ನೀಡಬೇಕು. ಇದರಿಂದ ನಾವು ಸಮಾಜದಲ್ಲಿ ಎಲ್ಲರಂತೆ ಬದುಕಲು ಸಹಾಯವಾಗುತ್ತದೆ ಎಂದು ಹೇಳಿದರು.
ಈ ವೇಳೆ ರಾಜೇಶ್ವರಿ ಬಿಸನಳ್ಳಿ, ಗೀತಾ ಕೆರೂರು, ರತ್ನಾ ವಜ್ರೇಶ್ವರಿ, ವಿಜಯಾ, ಸಂಪತ್‌ಕುಮಾರಿ, ನೀಲಮ್ಮ ಮಾರನಬಸರಿ, ಶಾರದಾ ಶಿರಸಂಗಿ, ಬಸಮ್ಮ, ಹೇಮಲತಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
1972ರ ಗ್ರಾಚ್ಯುಟಿ ಪಾವತಿ ಕಾಯ್ದೆ ಪ್ರಕಾರ ಯಾವುದೇ ಉದ್ಯೋಗ ಘಟಕದಲ್ಲಿ 5 ವರ್ಷ ಸೇವೆ ಪೂರ್ಣಗೊಳಿಸಿ ಸ್ವಯಂ ನಿವೃತ್ತಿಯಾದವರು ಸಹ ಗ್ರಾಚ್ಯುಟಿ ಪಡೆಯಲು ಅರ್ಹತೆಯನ್ನು ಪಡೆದುಕೊಳ್ಳುತ್ತಾರೆ. ಪೂರ್ಣಕಾಲಿಕ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ನಿವೃತ್ತಿಗೊಂಡ 30 ದಿನಗಳಲ್ಲಿ ಅವರಿಗೆ ಸಲ್ಲಬೇಕಾದ ಗ್ರಾಚ್ಯುಟಿ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಗ್ರಾಚ್ಯುಟಿ ಪಾವತಿಯಲ್ಲಿ ವಿಳಂಬವಾದರೆ ಶೇ.10ರಷ್ಟು ಬಡ್ಡಿ ಸಮೇತ ಸೇರಿಸಿ ಗ್ರಾಚ್ಯುಟಿ ಮೊತ್ತವನ್ನು ನೀಡಬೇಕೆಂಬುದು ಗ್ರಾಚ್ಯುಟಿ ಪಾವತಿ ಕಾಯ್ದೆಯ ನಿಬಂಧನೆಯಾಗಿದ್ದರೂ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು ಕಡೆಗಣಿಸಲಾಗಿದೆ ಎಂದು ಎಸ್.ಎಸ್. ಕಲ್ಲಳ್ಳಿ ಆಕ್ರೋಶ ವ್ಯಕ್ತಪಡಿಸಿದರು.


