ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಸಂಪತ್ತು ಇಲ್ಲದಿದ್ದರೂ ಮನುಷ್ಯ ಬದುಕಬಹುದು. ಆದರೆ ಮನುಷ್ಯನ ಆರೋಗ್ಯ ಹದಗೆಟ್ಟರೆ ಬಾಳಲು ಸಾಧ್ಯವಿಲ್ಲ. ದೇವರು ಕೊಟ್ಟ ಆರೋಗ್ಯಯುತ ಶರೀರವನ್ನು ಯಾವುದೇ ದುಶ್ಚಟಕ್ಕೆ ಬಲಿಮಾಡಿಕೊಳ್ಳದೇ ಇರುವಷ್ಟು ದಿನ ಆರೋಗ್ಯಯುತವಾಗಿ ಬದುಕಿ ಮುಂದಿನ ಪೀಳಿಗೆಗೆ ದಾರಿದೀಪವಾಗೋಣ ಎಂದು ಸೂಡಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅಶೊಕ್ ಕಂಬಿ ಹೇಳಿದರು.
ಸೂಡಿ ಗ್ರಾ.ಪಂ ವ್ಯಾಪ್ತಿಯ ದ್ಯಾಮಹುಣಶಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಡೆದ ಸಮುದಾಯ ಕಾಮಗಾರಿ ಬದು ನಿರ್ಮಾಣ ಕೆಲಸದಲ್ಲಿ ಕೂಲಿಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ವರ್ತಮಾನ ದಿನಗಳಲ್ಲಿ ಆರೋಗ್ಯವನ್ನು ಸದೃಢವಾಗಿಟ್ಟುಕೊಂಡವನೇ ಜೀವನದಲ್ಲಿ ಅತೀ ಶ್ರೀಮಂತ ವ್ಯಕ್ತಿಯಾಗುತ್ತಾನೆ. ಆರೋಗ್ಯ ಸದೃಢವಿದ್ದಾಗ ಜೀವನದಲ್ಲಿ ಎಲ್ಲ ಸುಖ ಸಂತೋಷವನ್ನು ಕಾಣಲು ಸಾಧ್ಯ. ಹುಟ್ಟಿನಿಂದ ಶ್ರೀಮಂತನಾಗಿದ್ದರೂ ಆರೋಗ್ಯದಲ್ಲಿ ಏರುಪೇರಾದರೆ ಶ್ರೀಮಂತಿಕೆ ಆತನನ್ನು ಉಳಿಸದು. ಅದೇ ಉತ್ತಮ ಆರೋಗ್ಯ ಹೊಂದಿದ್ದರೆ ಜೀವನ ಸುಖಮಯವಾಗಿರುತ್ತದೆ. ಹೀಗಾಗಿ ಕೂಲಿಕಾರ್ಮಿಕರು ಅನ್ಯ ಚಟಕ್ಕೆ ದಾಸರಾಗದೇ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಕುಟುಂಬ ಸದಸ್ಯರ ಒಳಿತಿಗೆ ಶ್ರಮಿಸಿ. ಈಗಿನ ಒತ್ತಡದ ಜೀವನದಲ್ಲಿ ಬಿಪಿ ಮತ್ತು ಶುಗರ್ ಸರ್ವೇಸಾಮಾನ್ಯ ಕಾಯಿಲೆಯಾಗಿವೆ. ಬಿಪಿ ಮತ್ತು ಶುಗರ್ ಬಂದಿದೆ ಎಂದು ಚಿಂತಿಸದೇ ಅದರ ಬಗ್ಗೆ ಮುಂಜಾಗೃತಾ ಕ್ರಮ ತಗೆದುಕೊಳ್ಳಿ ಎಂದರು.
ಸದ್ಯದ ಪರಿಸ್ಥಿತಿಯಲ್ಲಿ ವೈದ್ಯಕೀಯ ವೆಚ್ಚವನ್ನು ಭರಿಸುವುದು ಗ್ರಾಮೀಣ ಪ್ರದೇಶದ ಕೂಲಿಕಾರ್ಮಿಕರಿಗೆ ಕಷ್ಟ. ಹೀಗಾಗಿ ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಕೂಲಿಕಾರ್ಮಿಕರಿಗೆ ಉಚಿತವಾಗಿ ಆರೋಗ್ಯ ತಪಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಕೂಲಿಕಾರ್ಮಿಕರು ಇದರ ಸದುಪಯೋಗ ಪಡೆದುಕೊಂಡು, ಶಿಬಿರದಲ್ಲಿ ಭಾಗವಹಿಸಿದ ವೈದ್ಯರಿಂದ ಒಳ್ಳೆಯ ಸಲಹೆ ಪಡೆದುಕೊಳ್ಳಿ ಎಂದು ತಿಳಿಹೇಳಿದರು.
ಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿಗಳಾದ ಮಹೇಶ ಹಿರೇಮಠ, ದಿಲ್ಷಾನ್ ಮುಲ್ಲಾ, ಮನೋಹರ್ ಕಣ್ಣಿ ಹಾಗೂ ಆಶಾ ಕಾರ್ಯಕರ್ತೆಯರು ಆರೋಗ್ಯ ತಪಾಸಣೆ ಶಿಬಿರಲ್ಲಿ ಭಾಗವಹಿಸಿ, ನರೇಗಾ ಕೂಲಿಕಾರ್ಮಿಕರಿಗೆ ಬಿಪಿ, ಶುಗರ್ ಸೇರಿದಂತೆ ಸಾಮಾನ್ಯ ಆರೋಗ್ಯ ತಪಾಸಣೆ ಮಾಡಿದರು. ಕೂಲಿಕಾರರಿಗೆ ಅಗತ್ಯ ಮಾತ್ರೆಗಳನ್ನು ನೀಡಿ ಹೆಚ್ಚಿನ ಚಿಕಿತ್ಸೆಗೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪರ್ಕಿಸುವಂತೆ ತಿಳಿಸಿದರು.
ಶಿಬಿರದಲ್ಲಿ ನರೇಗಾ ವಿಭಾಗದ ತಾಂತ್ರಿಕ ಸಹಾಯಕ ಸುನೀಲ್ ಶಿರೋಳ, ಗ್ರಾಮ ಕಾಯಕಮಿತ್ರ ಸುಧಾ ಕುಷ್ಟಗಿ, ಬಿಎಫ್‌ಟಿ ಶಂಕರಗೌಡ ಪಾಟೀಲ್, ನರೇಗಾ ಸಿಬ್ಬಂದಿ ವರ್ಗ ಹಾಗೂ ಸೂಡಿ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.
ತಾಲೂಕು ಐಇಸಿ ಸಂಯೋಜಕ ಸುರೇಶ್ ಬಾಳಿಕಾಯಿ ಮಾತನಾಡಿ, ನರೇಗಾ ಯೋಜನೆಯಡಿ ಕೂಲಿಕಾರ್ಮಿಕರಿಗೆ ಅನೇಕ ಸೌಲಭ್ಯಗಳು ಇವೆ. ಯೋಜನೆಯಡಿ ಸಿಗುವ ಸೌಲಭ್ಯಗಳನ್ನು ಕೂಲಿಕಾರ್ಮಿಕರು ಸದೂಪಯೋಗಪಡಿಸಿಕೊಳ್ಳಬೇಕು. ಕಾವiಗಾರಿ ನಡೆಯುವ ಸ್ಥಳದಲ್ಲಿ ನೆರಳಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಪ್ರಥಮ ಚಿಕಿತ್ಸಾ ವ್ಯವಸ್ಥೆ, ಕೆಲಸದ ಬೇಸಿಗೆ ರಿಯಾಯತಿ ಸೌಲಭ್ಯಗಳನ್ನು ನರೇಗಾ ಕೂಲಿಕಾರ್ಮಿಕರು ಪಡೆದುಕೊಳ್ಳಬೇಕೆಂದು ಮಾಹಿತಿ ನೀಡಿದರು.