ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯಲ್ಲಿ ಡೆಂಗೀ ನಿಯಂತ್ರಣ ಮಾಡಲು ಗುಣಮಟ್ಟದ ಲಾರ್ವಾ ಸಮೀಕ್ಷೆ ಹಾಗೂ ಜ್ವರ ಸಮೀಕ್ಷೆ ಮಾಡಿ ಖಚಿತ ಪ್ರಕರಣಗಳು ಕಂಡುಬಂದಲ್ಲಿ ಸೂಕ್ತ ಚಿಕಿತ್ಸೆ ನೀಡಿ, ಸೂಕ್ತ ಆರೈಕೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಕರೆ ನೀಡಿದರು.
ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ವಿಭಾಗ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಗರ ಆರೋಗ್ಯ ಕೇಂದ್ರ ರೆಹಮತ್ ನಗರ ಗದಗ, ಗದಗ-ಬೆಟಗೇರಿ ನಗರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಗದುಗಿನ ಗಂಗಾಪೂರ ಪೇಟೆಯ ದುರ್ಗಾದೇವಿ ದೇವಸ್ಥಾನ ಹತ್ತಿರ ರಾಷ್ಟ್ರೀಯ ಡೆಂಗೀ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಜಾಥಾ ಮತ್ತು ಮಾನವ ಸರಪಳಿ ಪ್ರದರ್ಶನ, ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಹೆಚ್.ಎಲ್ ಗಿರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಡೆಂಗೀ ನಿವಾರಣೆಗೆ ಸಮುದಾಯದ ಪಾತ್ರ ಮಹತ್ವದಾಗಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರ ಅಗತ್ಯ ಸಹಕಾರ ದೊರೆತಾಗ ಮಾತ್ರವೇ ಗುರಿ ಸಾಧನೆಯು ಸುಲಭ ಸಾಧ್ಯವಾಗುತ್ತದೆ. ಈ ವರ್ಷದ ಸರ್ಕಾರದ ಘೋಷ ವಾಕ್ಯವಾದ `ಡೆಂಗೀ ಸೋಲಿಸಲು ಹೆಜ್ಜೆಗಳು: ಪರಿಶೀಲಿಸಿ, ಸ್ವಚ್ಛಗೊಳಿಸಿ, ಮುಚ್ಚಿಡಿ’ ಇದಕ್ಕೆ ಉತ್ತೇಜನ ನೀಡೋಣ ಎಂದರು.
ತಾಲೂಕಾ ಆರೋಗ್ಯ ಅಧಿಕಾರಿ (ಪ್ರಭಾರಿ) ಡಾ. ಪ್ರೀತ್ ಖೊನಾ, ಸಹಾಯಕ ಕೀಟಶಾಸ್ತ್ರಜ್ಞರಾದ ಅನ್ನಪೂರ್ಣ ಶೆಟ್ಟರ, ಕಾರ್ಯಕ್ರಮದ ಅನುಷ್ಠಾನ ಅಧಿಕಾರಿಗಳಾದ ಡಾ. ಸ್ಪರ್ಷಾ, ಡಿ.ವಾಯ್.ಹೆಚ್.ಇ.ಓ ಪುಷ್ಪಾ ಪಾಟೀಲ, ಡಿ.ವಾಯ್.ಹೆಚ್.ಇ.ಓ ಗೀತಾ, ಇಬ್ರಾಹಿಂ ಮಕಾಂದಾರ, ಆನಂದ ಬದಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಕ್ಷೇತ್ರ ಮಟ್ಟದ ಅಧಿಕಾರಿಗಳ ವೃಂದ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ರೂಪಸೇನ ಚವ್ಹಾಣ ಸ್ವಾಗತಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಅಜಯಕುಮಾರ ಕಲಾಲ ವಂದಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ ಮಾತನಾಡಿ, ಜಿಲ್ಲೆಯಲ್ಲಿ ಕ್ರಿಯಾ ಯೋಜನೆ ತಯಾರಿಸಿ ಗುಣಮಟ್ಟದ ಲಾರ್ವಾ ಸಮೀಕ್ಷೆ ಮಾಡಲು ಗ್ರಾಮೀಣ/ಶಹರ ಮಟ್ಟದಲ್ಲಿ ಹೆಚ್ಚಿನ ಕಾರ್ಯನಿರ್ವಹಿಸಿ ಜಿಲ್ಲೆಯಲ್ಲಿ ಸ್ಥಳೀಯವಾಗಿ ಯಾವುದೇ ಡೆಂಗೀ ಪ್ರಕರಣಗಳು ಕಂಡು ಬರದ ಹಾಗೆ ನೋಡಿಕೊಳ್ಳಲು ತಿಳಿಸಿದರು.


