ವಿಜಯಸಾಕ್ಷಿ ಸುದ್ದಿ, ಗದಗ: ಗದಗ ವಿಭಾಗದ ಎಲ್ಲ ತಾಲೂಕಾ ಕೇಂದ್ರ ಬಸ್ ನಿಲ್ದಾಣಗಳಲ್ಲಿ `ನಮ್ಮ ಬಸ್ ನಿಲ್ದಾಣ-ಸ್ವಚ್ಛ ನಿಲ್ದಾಣ’ ಶೀರ್ಷಿಕೆಯಡಿಯಲ್ಲಿ ಬಸ್ ನಿಲ್ದಾಣದ ನಿರ್ವಹಣೆಯ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಪಡೆಯಲು ಕ್ಯೂಆರ್ ಕೋಡ್ ಮುದ್ರಿತ ಭಿತ್ತಿ ಪತ್ರವನ್ನು ಗದಗ ಹೊಸ ಬಸ್ ನಿಲ್ದಾಣದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಡಿ.ಎಂ. ದೇವರಾಜ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಬಸ್ ನಿಲ್ದಾಣಗಳ ಸ್ವಚ್ಛತೆ, ಶೌಚಾಲಯಗಳ ನಿರ್ವಹಣೆ, ತ್ಯಾಜ್ಯ ವಿಲೇವಾರಿ, ಶೌಚಾಲಯದ ದರ ಪಟ್ಟಿ ಅಳವಡಿಕೆ, ಶುದ್ಧ ನೀರಿನ ವ್ಯವಸ್ಥೆ, ಸಂಚಾರ ನಿಯಂತ್ರಕರ ಸೌಜನ್ಯದ ನಡವಳಿಕೆ ಇತ್ಯಾದಿ ಅಂಶಗಳ ಕುರಿತು ಮೌಲ್ಯಮಾಪನ ಮಾಡಿ ಶ್ರೇಣಿವಾರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಕುರಿತಾಗಿ ಕ್ರಮ ಕೈಗೊಳ್ಳಲು ಸಂಸ್ಥೆಯ ಮಾನ್ಯ ವ್ಯವಸ್ಥಾಪಕ ನಿರ್ದೇಶಕರ ಸೂಚನೆಯಂತೆ ಎಲ್ಲ ಬಸ್ ನಿಲ್ದಾಣಗಳಲ್ಲಿ ಭಿತ್ತಿ ಪತ್ರವನ್ನು ಪ್ರದರ್ಶಿಸಲಾಗುವದು. ಸಾರ್ವಜನಿಕರು ತಮ್ಮ ಮೊಬೈಲ್ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹೆಚ್ಚು ಹೆಚ್ಚು ಅಭಿಪ್ರಾಯ ದಾಖಲಿಸಲು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿ ಪಿ.ವಿ. ಮೇತ್ರಿ, ಸಿ.ವಿ. ಇಟಗಿ ವಿತಾಂಶಿ, ವಿದ್ಯಾ ಕಾಂಬಳೆ, ಬಿ.ಎಲ್. ಗೆಣ್ಣೂರ, ಸಾರಿಗೆ ನಿಯಂತ್ರಕರು ಹಾಗೂ ಪ್ರಯಾಣಿಕರು ಹಾಜರಿದ್ದರು.
ಅಭಿಪ್ರಾಯ ದಾಖಲಿಸುವುದು ಹೇಗೆ?
ಮೊಬೈಲ್ನಿಂದ ಕ್ಯೂಆರ್ ಕೋಡ್ನ್ನು ಸ್ಕ್ಯಾನ್ ಮಾಡುವದು. ಕ್ಯೂಆರ್ ಕೋಡ್ ಲಿಂಕ್ನಲ್ಲಿ ತಮ್ಮ ನೋಂದಾಯಿತ ಇ-ಮೇಲ್ ಐಡಿ ರಿಜಿಸ್ಟರ್ ಮಾಡುವದು. ಶೌಚಾಲಯದ ಸ್ವಚ್ಛತೆ, ಬಸ್ ನಿಲ್ದಾಣದ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ/ಮೂತ್ರಾಲಯದ ಬಳಕೆಯ ಶುಲ್ಕದ ಕುರಿತು ರೇಟಿಂಗ್ಸ್ ನೀಡುವದು. ಇತರೆ ಅನಿಸಿಕೆ ಅಥವಾ ಅಭಿಪ್ರಾಯವನ್ನು ದಾಖಲಿಸುವದು. ಒಟ್ಟಾರೆ ಶ್ರೇಣಿಯನ್ನು ನೀಡುವದು. ಇದರಿಂದಾಗಿ ಬಸ್ ನಿಲ್ದಾಣದ ಸ್ವಚ್ಛತೆ ನಿರ್ವಹಿಸಲು ಹಾಗೂ ಸಂಸ್ಥೆಯ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಉತ್ತಮ ರೀತಿಯಿಂದ ವರ್ತಿಸಲು ಸಹಕಾರಿಯಾಗುತ್ತದೆ.