ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ಸಾರಸ್ವತ ಲೋಕದ ಅಟ್ಟ ಎಂದೇ ಕರೆಯಲ್ಪಡುತ್ತಿದ್ದ ಮನೋಹರ ಗ್ರಂಥಮಾಲಾದ ವ್ಯವಸ್ಥಾಪಕರು, ನಿವೃತ್ತ ಪ್ರಾಧ್ಯಾಪಕರೂ ಆಗಿದ್ದ ರಮಾಕಾಂತ ಜೋಷಿ(89) ಅವರ ನಿಧನಕ್ಕೆ ಕಾನೂನು, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಶೋಕ ವ್ಯಕ್ತಪಡಿಸಿದ್ದಾರೆ.
ಖ್ಯಾತ ಸಾಹಿತಿ ಮತ್ತು ಮನೋಹರ ಗ್ರಂಥಮಾಲಾದ ರೂವಾರಿ ಜಿ.ಬಿ. ಜೋಷಿ (ಜಡಭರತ) ಅವರ ಪುತ್ರರಾಗಿದ್ದ ರಮಾಕಾಂತ ಜೋಷಿ ಧಾರವಾಡದ ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತವನ್ನು ನಾಡಿಗೆ ಪರಿಚಯಿಸುವುದರಲ್ಲಿ ತೊಡಗಿಸಿಕೊಂಡಿದ್ದರು.
ಮನೋಹರ ಗ್ರಂಥಮಾಲಾ ಎಂದರೆ ಖ್ಯಾತ ಸಾಹಿತಿಗಳು, ದಿಗ್ಗಜರು, ಕವಿಗಳು, ವಿಮರ್ಶಕರು, ಸಂಗೀತಗಾರರು ಸೇರುವ ಹಾಗೂ ಚರ್ಚಿಸುವ, ಅವರಿಗೆಲ್ಲಾ ಸ್ಫೂರ್ತಿ ನೀಡುವ ಸ್ಥಳವಾಗಿತ್ತು. ಕನ್ನಡದ ಕೀರ್ತಿ ಕೀರ್ತಿನಾಥ ಕುರ್ತಕೋಟಿ, ಗಿರೀಶ ಕಾರ್ನಾಡ, ಚನ್ನವೀರ ಕಣವಿ, ಗಿರಡ್ಡಿ ಗೋವಿಂದರಾಜು, ಖ್ಯಾತ ಸಂಶೋಧಕ ಎಂ.ಎಂ. ಕಲಬುರ್ಗಿ ಮುಂತಾದ ಖ್ಯಾತ ಸಾಹಿತಿಗಳ ಸಂಗಮ ಇಲ್ಲಿರುತ್ತಿತ್ತು. ಹೀಗಾಗಿ ಮನೋಹರ ಗ್ರಂಥಮಾಲಾ ಅಟ್ಟ ಎಂದರೆ ಕನ್ನಡ ಸಾಹಿತ್ಯ, ಸಂಗೀತ ಕ್ಷೇತ್ರವನ್ನು ಜತೆಗೆ ಧಾರವಾಡದ ಹಿರಿಮೆಯನ್ನು ಅಟ್ಟಕ್ಕೇರಿಸಿದ ಸಂಸ್ಥೆ ಎಂದು ಎಚ್.ಕೆ. ಪಾಟೀಲ ಹೇಳಿದ್ದಾರೆ.
ರಮಾಕಾಂತ ಜೋಷಿ ಅವರ ನಿಧನದಿಂದ ಧಾರವಾಡದ ಸಾಹಿತ್ಯ, ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿ ಕೊಂಡಿಯೊಂದು ಕಳಚಿದಂತಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.