ವಿಜಯಸಾಕ್ಷಿ ಸುದ್ದಿ, ಬಳ್ಳಾರಿ
ಯುವಕನೊಬ್ಬ ಇಲ್ಲಿಯ ವಿಮ್ಸ್ ಆಸ್ಪತ್ರೆಗೆ ನುಗ್ಗಿ ಕಾರ್ಯನಿರತ ಮಹಿಳಾ ವೈದ್ಯರ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಇಲ್ಲಿಯ ವಿಮ್ಸ್ ಆಸ್ಪತ್ರೆಯಲ್ಲಿ ತಡರಾತ್ರಿ ನಡೆದಿದೆ. ಕೊರೊನಾ ಸೋಂಕಿತರ ಸೇವೆಯಲ್ಲಿ ನಿರತರಾಗಿದ್ದ ಮಹಿಳಾ ವೈದ್ಯೆಯ ಮೇಲೆ ಈ ಯುವಕ ತಡ ರಾತ್ರಿ 3ಗಂಟೆಯ ಹೊತ್ತಿಗೆ ನುಗ್ಗಿ ಹಲ್ಲೆ ಮಾಡಿ, ರಂಪಾಟ ನಡೆಸಿದ್ದಾನೆ.
ಈ ಯುವಕ ಡಾ. ಪ್ರಿಯದರ್ಶಿನಿ ಎಂಬ ವೈದ್ಯೆಯ ಮೇಲೆ ಹಲ್ಲೆ ನಡೆಸಿದ್ದಾನೆ. ವೈದ್ಯೆಯ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತಿಪ್ಪೇಸ್ವಾಮಿ ಎಂಬ ಯುವಕ ವೈದ್ಯೆಯ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ವ್ಯಕ್ತಿಯ ತಂದೆ ಮಲ್ಲಿಕಾರ್ಜುನ ಗೌಡ ಕೊರೊನಾದಿಂದ ಸಾವನ್ನಪ್ಪಿದ್ದರು. ಹೀಗಾಗಿ ಆಕ್ರೋಶಗೊಂಡು ವೈದ್ಯೆಯ ಮೇಲೆಯೇ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಮಲ್ಲಿಕಾರ್ಜುನಗೊಡ ಹೃದಯಾಘಾತದಿಂದ ಸಾವನ್ನಪ್ಪಿದ್ದರು ಎಂದು ವೈದ್ಯರು ಹೇಳಿದ್ದಾರೆ. ಆದರೆ, ನಮ್ಮ ತಂದೆಯ ಸಾವಿಗೆ ವೈದ್ಯರೇ ಕಾರಣ ಎಂದು ತಿಪ್ಪೇಸ್ವಾಮಿ ಹಲ್ಲೆ ನಡೆಸಿದ್ದಾರೆ. ರೋಗಿಯ ಸಂಬಂಧಿಕರ ದುರ್ವರ್ತನೆಗೆ ಸದ್ಯ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ವೈದ್ಯರ ಮೇಲೆ ಈ ರೀತಿ ಹಲ್ಲೆಗಳಾದರೆ, ವೈದ್ಯರು ಕರ್ತವ್ಯ ನಿರ್ವಹಿಸುವುದು ಹೇಗೆ ಎಂದು ವೈದ್ಯಕೀಯ ಸಿಬ್ಬಂದಿ ಪ್ರಶ್ನಿಸುತ್ತಿದ್ದಾರೆ.
ಸದ್ಯ ಹಲ್ಲೆ ನಡೆಸಿದ ತಿಪ್ಪೇಸ್ವಾಮಿ ವಿರುದ್ಧ ಕೌಲ್ ಬಜಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.