ಬೆಂಗಳೂರು: ಕೇಂದ್ರದಿಂದ ಕರ್ನಾಟಕಕ್ಕೆ ಅನುದಾನ ಬಿಡುಗಡೆಯಾಗಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಸಂಬಂಧ X ಮಾಡಿರುವ ಅವರು, ಕೇಂದ್ರ ಸರ್ಕಾರ ಕೊಟ್ಟ ಹಣವನ್ನು ಸರಿಯಾಗಿ ಬಳಸದೇ ಕರ್ನಾಟಕ ಮುಖ್ಯಮಂತ್ರಿಗಳು ವೃಥಾ ಆರೋಪ ಮಾಡುತ್ತಿದ್ದಾರೆ. ತಮ್ಮ ಹಣಕಾಸು ನಿರ್ವಹಣೆಯ ಅಸಮರ್ಥತೆ ಮುಚ್ಚಿಹಾಕಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದರು. ಕೇಂದ್ರದಿಂದ ಹಣ ಬಿಡುಗಡೆಯಾಗದ ಒಂದೇ ಒಂದು ಯೋಜನೆಯನ್ನು ಸಿದ್ದರಾಮಯ್ಯ ಹೆಸರಿಸಲಿ ನೋಡೋಣ ಎಂದು ಸವಾಲೆಸೆದಿದ್ದಾರೆ.
ಹಣಕಾಸು ನಿರ್ವಹಣೆಯಲ್ಲಿನ ತಮ್ಮ ಅಸಮರ್ಥತೆಯನ್ನು ಒಪ್ಪಿಕೊಳ್ಳುವ ಬದಲು, ಸಿಎಂ ಸಿದ್ದರಾಮಯ್ಯ ಮತ್ತು ಅವರ ಸರ್ಕಾರ ಕೇಂದ್ರದ ಮೇಲೆ ಆರೋಪ ಹೊರಿಸುತ್ತಲೇ ಇದ್ದಾರೆ. ತಮ್ಮ ಅಸಮರ್ಥತೆ ಮತ್ತು ಕಾಂಗ್ರೆಸ್ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿನ ವೈಫಲ್ಯವನ್ನು ಮುಚ್ಚಿಹಾಕಲು ಅವರು ಈ ರೀತಿ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಕೇಂದ್ರ ಸರ್ಕಾರದಿಂದ ಬರಬೇಕಾದ 4,195 ಕೋಟಿ ರೂ. ಅನುದಾನ ಬಾಕಿ ಇದೆ ಎಂದು ಸಿದ್ದರಾಮಯ್ಯ ದೂರುವುದು ಬೂಟಾಟಿಕೆ ಎಂದು ಜೋಶಿ ಟೀಕಿಸಿದ್ದಾರೆ. ಪಿಎಂಎವೈ (ಗ್ರಾಮೀಣ), ಸ್ವಚ್ಛ ಭಾರತ ಮಿಷನ್ (ನಗರ), ಅಮೃತ್, ಪೋಷಣ್, ಸಮಗ್ರ ಶಿಕ್ಷಾ ಮುಂತಾದ ಹಲವು ಪ್ರಮುಖ ಯೋಜನೆಗಳು ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಕೇಂದ್ರ ಯೋಜನೆಗಳ ಅಡಿಯಲ್ಲಿ 5,000 ಕೋಟಿ ರೂಪಾಯಿಗೂ ಹೆಚ್ಚು ಹಣ ಲಭ್ಯವಿದೆ ಎಂದು ಸಿದ್ದರಾಮ್ಯ ಅವರ ಸರ್ಕಾರದ ಖಜಾನೆಯ ಮೂಲಗಳೇ ನಮಗೆ ತಿಳಿಸಿವೆ ಎಂದು ಅವರು ಹೇಳಿದ್ದಾರೆ.
ಈಗಾಗಲೇ ಕೇಂದ್ರದಿಂದ ನೀಡಲಾಗಿರುವ ಹಣವನ್ನು ಕರ್ನಾಟಕವು ಸಂಪೂರ್ಣವಾಗಿ ಬಳಸಿಕೊಂಡಿದ್ದು, ಆ ನಂತರವೂ ಕೇಂದ್ರ ಸರ್ಕಾರ ಹಣವನ್ನು ತಡೆಹಿಡಿದಿರುವ ಒಂದು ನಿರ್ದಿಷ್ಟ ಯೋಜನೆ ಇದೆ ಎಂದು ಸಿದ್ದರಾಮಯ್ಯ ಭಾವಿಸಿದ್ದಾರೆ ಎಂದಿಟ್ಟುಕೊಳ್ಳೋಣ. ಒಂದು ವೇಳೆ ಹಾಗಿದ್ದರೆ, ಆ ಯೋಜನೆ ಯಾವುದೆಂಬುದನ್ನು ಸ್ಪಷ್ಟಪಡಿಸಲಿ. ವಾಸ್ತವದಲ್ಲಿ ಇದು ಸಾಧ್ಯವೇ ಇಲ್ಲ. ಯಾಕೆಂದರೆ, ಕೇಂದ್ರದಿಂದ ಬಿಡುಗಡೆಯಾದ ಹಣವನ್ನು ಖರ್ಚು ಮಾಡುವಲ್ಲಿಯೂ ಕರ್ನಾಟಕ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಜೋಶಿ ಟೀಕಿಸಿದ್ದಾರೆ.