ಬೆಂಗಳೂರು:- ರಾಜಕಾಲುವೆ ಸೇರಿ ಸುಮಾರು 4,292 ಕಡೆ ಒತ್ತುವರಿ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಬೆಂಗಳೂರು ನಗರದಲ್ಲಿ ರಾಜಕಾಲುವೆಗಳೂ ಸೇರಿ ಸುಮಾರು 4,292 ಕಡೆ ಒತ್ತುವರಿ ಆಗಿದೆ. ಇನ್ನೂ ಕೆಲ ರಾಜಕಾಲುವೆಗಳು ಆಳವಾಗಿಲ್ಲ, ಅದರ ಕೆಲಸ ಪ್ರಗತಿಯಲ್ಲಿದೆ. ರಾಜಕಾಲುವೆಗಳು ಪೂರ್ಣವಾಗದೇ ಇರುವುದರಿಂದ ನೀರು ಹೊರಗಡೆ ಬರುವುದನ್ನ ತಡೆಯೋದು ಕಷ್ಟ. ಸದ್ಯ 166 ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಅಂತ ಗುರುತಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿಗೆ ಅನಿರೀಕ್ಷಿತವಾಗಿ ಹೆಚ್ಚು ಮಳೆ ಬಿದ್ದಿದೆ. ನಿನ್ನೆ ಮಳೆಯಾಗಿದ್ದರಿಂದ ಕೆರೆಗಳು ತುಂಬಿದೆ. 104 ಮಿಮೀ ಮಳೆ ಆಗಿದೆ. ಡಿಕೆಶಿ ಕೆಲವು ಪ್ರದೇಶಕ್ಕೆ ಹೋಗ್ತಾರೆ. ಅವರಿಂದಲೂ ಮಾಹಿತಿ ಪಡೆಯುತ್ತೇನೆ. ಟ್ರಾಫಿಕ್ ಪೊಲೀಸರು 133 ಜಾಗ ಗುರುತಿಸಿದ್ದಾರೆ. ಸಿಲ್ಕ್ ಬೋರ್ಡ್ ಜಂಕ್ಷನ್, ಹೆಬ್ಬಾಳ ಕಡೆಗಳಲ್ಲಿ ರೈಲ್ವೇ ಪಾಯಿಂಟ್ ಇದ್ದು, ಕೆಲಸ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಇವತ್ತು ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲು 2 ಬಸ್ಸು ತರಿಸಿದ್ದೆ. ಅಲ್ಲಿ ಹೋದ್ರೆ ಅಧಿಕಾರಿಗಳಿಗೆ ತೊಂದ್ರೆ ಆಗುತ್ತೆ ಅಂತ ಹೋಗಿಲ್ಲ. ಸಾಯಿ ಲೇಔಟ್ನಲ್ಲಿ ನಾಲ್ಕುವರೆ ಅಡಿ ನೀರು ಇತ್ತು, ಎರಡು ಅಡಿ ನೀರು ಕಡಿಮೆ ಆಗಿದೆ. ಸಮಸ್ಯೆ ಸಿಲುಕಿಕೊಂಡವರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಮಳೆಹಾನಿ ಪ್ರದೇಶದಲ್ಲಿರುವ ಸ್ಥಳೀಯರಿಗೆ ಪೊಲೀಸರು ಮತ್ತು ಇತರ ಅಧಿಕಾರಿಗಳು ಊಟದ ವ್ಯವಸ್ಥೆ ಮಾಡುತ್ತಾರೆ. ಮೇ 21ಕ್ಕೆ ನಾನು, ಡಿಸಿಎಂ ಸಿಟಿ ರೌಂಡ್ಸ್ ಮಾಡಿ ಸಂಪೂರ್ಣ ವರದಿ ಪಡೆಯಲಿದ್ದೇವೆ ಎಂದು ತಿಳಿಸಿದರು.