ಐದು ನವೀಕೃತ ನಿಲ್ದಾಣಗಳು ಲೋಕಾರ್ಪಣೆಗೆ ಸಜ್ಜು:  ಮೇ 22ರಂದು ಲೋಕಾರ್ಪಣೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನೈರುತ್ಯ ರೈಲ್ವೆ ವಿಭಾಗದ ಐದು ಪ್ರಮುಖ ರೈಲ್ವೆ ನಿಲ್ದಾಣಗಳು ನವೀಕರಣಗೊಂಡು ಹೊಸ ರೂಪ ಪಡೆದುಕೊಂಡಿದ್ದು, ಮೇ 22ರಂದು ಲೋಕಾರ್ಪಣೆಗೊಳ್ಳಲು ಸಿದ್ಧವಾಗಿವೆ. ಗದಗ, ಧಾರವಾಡ, ಗೋಕಾಕ, ಬಾಗಲಕೋಟೆ ಹಾಗೂ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ರೈಲ್ವೆ ನಿಲ್ದಾಣಗಳು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ `ಅಮೃತ ಭಾರತ್ ರೈಲ್ವೆ ಸ್ಟೇಷನ್ ಯೋಜನೆ’ಯ ಅಡಿಯಲ್ಲಿ ಮೇಲ್ದರ್ಜೆಗೇರಿಸಲ್ಪಟ್ಟಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೇ 22ರಂದು ವರ್ಚುವಲ್ ಕಾರ್ಯಕ್ರಮದ ಮೂಲಕ ಈ ನವೀಕೃತ ನಿಲ್ದಾಣಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ.

Advertisement

ವಿಶ್ವದರ್ಜೆಯ ಸೌಲಭ್ಯಗಳು ಹಾಗೂ ಆಯಾ ಪ್ರದೇಶದ ವಿಶಿಷ್ಟ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ರೀತಿಯಲ್ಲಿ ಈ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಎಲ್ಲಾ ನಿಲ್ದಾಣಗಳಲ್ಲೂ ಏಕರೂಪದ ಪ್ರವೇಶ ದ್ವಾರವನ್ನು ನಿರ್ಮಿಸಲಾಗಿದೆ. ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ 12 ಮೀಟರ್ ಅಗಲದ ಪಾದಾಚಾರಿ ಮೇಲ್ಸೇತುವೆ, ಲಿಫ್ಟ್ ಮತ್ತು ಎಸ್ಕಲೇಟರ್ ಸೌಲಭ್ಯಗಳನ್ನು ಒದಗಿಸಲಾಗಿದೆ. ಟಿಕೆಟ್ ಕಾಯ್ದಿರಿಸುವಿಕೆ ಹಾಗೂ ಸಾಮಾನ್ಯ ಟಿಕೆಟ್ ಕೊಳ್ಳುವಿಕೆಗಾಗಿ ಕನಿಷ್ಠ ಮೂರು ಮತ್ತು ಗರಿಷ್ಠ ಐದು ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಸ್ಥಳೀಯ ಉತ್ಪನ್ನಗಳ ಮಾರಾಟ ಮಳಿಗೆಗಳು, ಸುಸಜ್ಜಿತ ಶೌಚಾಲಯಗಳು (ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಹಾಗೂ ವಿಶೇಷ ಚೇತನರಿಗೆ ಪ್ರತ್ಯೇಕ ವ್ಯವಸ್ಥೆ), ವಿಶಾಲವಾದ ಕಾಯುವ ಕೊಠಡಿಗಳು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಉಪಹಾರ ಗೃಹಗಳನ್ನು ಒಳಗೊಂಡಿವೆ. ಈ ಎಲ್ಲಾ ಸೌಲಭ್ಯಗಳು ಪ್ರಯಾಣಿಕರಿಗೆ ಆರಾಮದಾಯಕ ಹಾಗೂ ಉತ್ತಮ ಪ್ರಯಾಣದ ಅನುಭವವನ್ನು ನೀಡಲು ಸಜ್ಜಾಗಿವೆ.

ಗದುಗಿನಲ್ಲಿ ಜಿ+1 ಮಾದರಿಯ ಕಟ್ಟಡವನ್ನು ಹೊಂದಿದ್ದು, ಪ್ಲಾಟ್‌ಫಾರ್ಮ್ ನಂಬರ್ 2ರಲ್ಲಿ ಎಸ್ಕಲೇಟರ್ ಹಾಗೂ ಎಲ್ಲಾ ಪ್ಲಾಟ್‌ಫಾರ್ಮ್ಗಳಲ್ಲಿ ಲಿಫ್ಟ್ ಅಳವಡಿಸಲಾಗಿದೆ. ನಿಲ್ದಾಣದ ಹೊರ ಆವರಣದಲ್ಲಿ ಬಸ್ ನಿಲ್ದಾಣ, ಆಟೋ ನಿಲ್ದಾಣ, ವಾಹನ ನಿಲುಗಡೆ ಪ್ರದೇಶ, ಸ್ಟೇಷನ್ ಮ್ಯಾನೇಜರ್ ಕೊಠಡಿ ಮತ್ತು ಸ್ಪಷ್ಟ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.

ಈ ನಿಲ್ದಾಣಗಳ ನಿರ್ಮಾಣಕ್ಕಾಗಿ ಗೋಕಾಕ-16.98 ಕೋಟಿ ರೂ, ಧಾರವಾಡ-17.1 ಕೋಟಿ ರೂ, ಮುನಿರಾಬಾದ್-18.4 ಕೋಟಿ ರೂ, ಗದಗ-23.24 ಕೋಟಿ ರೂ, ಬಾಗಲಕೋಟೆ-16.06 ಕೋಟಿ ರೂ ವೆಚ್ಚ ಮಾಡಲಾಗಿದೆ.

ಕೊನೆಯ ಕ್ಷಣದ ಸಿದ್ಧತೆ

ಲೋಕಾರ್ಪಣೆ ಸಮೀಪಿಸುತ್ತಿದ್ದಂತೆ, ನಿಲ್ದಾಣಗಳಲ್ಲಿ ಕೊನೆಯ ಹಂತದ ಕಾಮಗಾರಿಗಳು ಭರದಿಂದ ಸಾಗಿವೆ. ಲಿಫ್ಟ್ ಮತ್ತು ಎಸ್ಕಲೇಟರ್‌ಗಳ ಪರೀಕ್ಷೆ, ಟಿಕೆಟ್ ಕೌಂಟರ್‌ಗಳ ಸ್ಥಳಾಂತರ ಹಾಗೂ ನಿಲ್ದಾಣದ ಸ್ವಚ್ಛತಾ ಕಾರ್ಯಗಳು ವೇಗವಾಗಿ ನಡೆಯುತ್ತಿವೆ.

ಅಧಿಕಾರಿಗಳ ಅಭಿಪ್ರಾಯ

ನೈರುತ್ಯ ರೈಲ್ವೆ ವಲಯದ ಸಾರ್ವಜನಿಕ ಮುಖ್ಯ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿಯವರು ಈ ಬಗ್ಗೆ ಮಾತನಾಡಿ, ಅಮೃತ ಭಾರತ್ ರೈಲ್ವೆ ನಿಲ್ದಾಣ ಯೋಜನೆಯಡಿ ನೈರುತ್ಯ ರೈಲ್ವೆ ವಲಯದ 5 ನಿಲ್ದಾಣಗಳು ನವೀಕರಣಗೊಂಡಿದ್ದು, ಮೇ 22ರಂದು ಲೋಕಾರ್ಪಣೆಗೆ ಸಿದ್ಧವಾಗಿವೆ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here