ವಿಜಯಸಾಕ್ಷಿ ಸುದ್ದಿ, ಗದಗ: ಅಧಿಕ ರಕ್ತದೊತ್ತಡವನ್ನು ಸಾಮಾನ್ಯವಾಗಿ ಬಿಪಿ ಎಂದು ಕರೆಯುತ್ತೇವೆ. ಇದು ನಮ್ಮ ಕಾಲದ ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿ ಬೆಳೆದಿದೆ. ಇದು ಜಾಗತಿಕವಾಗಿ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಕಾಯಿಲೆಯಾಗಿದೆ ಮತ್ತು ಇದು ಹೃದಯಾಘಾತ, ಪಾರ್ಶ್ವವಾಯು, ಮೂತ್ರಪಿಂಡ ವೈಫಲ್ಯದಂತಹ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಪ್ರಾಂಶುಪಾಲ ಅಮರಯ್ಯ ಚಿನ್ನಯ್ಯನಮಠ ತಿಳಿಸಿದರು.
ಇಲ್ಲಿನ ವಿ.ಪಿ. ಗಾಲಾ ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿಯಮಿತವಾಗಿ ನಮ್ಮ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಬೇಕು. ವೈದ್ಯರನ್ನು ಭೇಟಿ ಮಾಡಿ ಅಥವಾ ಮನೆಯಲ್ಲಿಯೇ ರಕ್ತದೊತ್ತಡ ಮಾನಿಟರ್ ಬಳಸಿ ನಮ್ಮ ಬಿಪಿ ಮಟ್ಟವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಒಂದು ವೇಳೆ ಅಧಿಕ ರಕ್ತದೊತ್ತಡ ಇರುವುದು ದೃಢಪಟ್ಟರೆ, ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆ ಮತ್ತು ಔಷಧಿಗಳನ್ನು ತೆಗೆದುಕೊಳ್ಳಬೇಕು. ಅಧಿಕ ರಕ್ತದೊತ್ತಡವನ್ನು ನಿರ್ಲಕ್ಷಿಸುವುದು ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಕ್ಷರಾದ ರಚನಾ ಗಾಲಾ, ಸೆಕ್ರೆಟರಿ ಪಂಕಜ್ ಗಾಲಾ, ನಿರ್ದೇಶಕ ಗುಂಜನ ಗಾಲಾ ಹಾಜರಿದ್ದರು.