ಬೆಂಗಳೂರು: ಆಂಧ್ರ ಪ್ರದೇಶ – ಕರ್ನಾಟಕದ ಉತ್ತಮ ಬಾಂಧವ್ಯ ಇನ್ನಷ್ಟು ವೃದ್ಧಿಯಾಗಲಿದೆ ಎಂದು ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಹೇಳಿದ್ದಾರೆ. ವಿಧಾನಸೌಧದ ಪೂರ್ವ ದ್ವಾರದ ಮೆಟ್ಟಿಲುಗಳ ಮೇಲೆ ಆಯೋಜಿಸಲಾಗಿದ್ದ ಕುಮ್ಕಿ ಆನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ನಾನು ಅರಣ್ಯ ಇಲಾಖೆ ಸಚಿವರಿಗೆ ಧನ್ಯವಾದ ಹೇಳುತ್ತೇನೆ. ಆಂಧ್ರ ಪ್ರದೇಶ 30 ವರ್ಷಗಳಿಂದ ಮಾನವ-ಆನೆ ಸಂಘರ್ಷದ ಸಮಸ್ಯೆ ಎದುರಿಸುತ್ತಿದೆ. ಸಂಘರ್ಷ ತಡೆಗೆ ಕರ್ನಾಟಕ ಉತ್ತಮ ಕೆಲಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಆನೆಗಳನ್ನು ಕೇಳಿದ್ದೆವು. ನಮ್ಮ ಮನವಿಗೆ ಕರ್ನಾಟಕ ಸರ್ಕಾರ ಒಪ್ಪಿದೆ. ಇದಕ್ಕೆ ನಾವು ಆಭಾರಿಯಾಗಿದ್ದೇವೆ.
ಈ ಬೆಳವಣಿಗೆಯಿಂದ ಆಂಧ್ರ ಪ್ರದೇಶ – ಕರ್ನಾಟಕದ ಉತ್ತಮ ಬಾಂಧವ್ಯ ಇನ್ನಷ್ಟು ವೃದ್ಧಿಯಾಗಲಿದೆ ಎಂದು ಹೇಳಿದರು. ನಮ್ಮ ಬಳಿ ಎರಡು ಕುಮ್ಕಿ ಆನೆ ಇವೆ. ಆದರೆ, ಆ ಆನೆಗಳಿಗೆ ವಯಸ್ಸಾಗಿದೆ, ಅಷ್ಟು ಶಕ್ತಿ ಇಲ್ಲ. ಹೀಗಾಗಿ ಕುಮ್ಕಿ ಆನೆಗಳಿಗೆ ಮನವಿ ಮಾಡಿದ್ದೆವು. ಕರ್ನಾಟಕ ಸರ್ಕಾರ ಅವುಗಳನ್ನು ಕೊಟ್ಟಿದ್ದು, ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದರು.