ಸದ್ಗುಣಗಳೇ ಮನುಷ್ಯನ ನಿಜವಾದ ಆಸ್ತಿ

0
oplus_2
Spread the love

ವಿಜಯಸಾಕ್ಷಿ ಸುದ್ದಿ, ಭಾಲ್ಕಿ: ಸುಖ, ಶಾಂತಿಯ ಬದುಕಿಗೆ ಆದರ್ಶ ಮೌಲ್ಯಗಳ ಪರಿಪಾಲನೆ ಬೇಕು. ಒಳ್ಳೆಯ ಕೆಲಸ ಕಾರ್ಯಗಳಿಂದ ಪ್ರವರ್ಧಮಾನಕ್ಕೆ ಬರಲು ಸಾಧ್ಯವಾಗುತ್ತದೆ. ಒಳ್ಳೆಯ ಗುಣ-ಸ್ವಭಾವಗಳೇ ಮನುಷ್ಯನ ನಿಜವಾದ ಆಸ್ತಿ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ತಾಲೂಕಿನ ಮೇಹಕರ ಕಟ್ಟಿಮನಿ ಸಂಸ್ಥಾನ ಹಿರೇಮಠದ ಶ್ರೀ ರಾಜೇಶ್ವರ ಶಿವಾಚಾರ್ಯರ ಪಟ್ಟಾಧಿಕಾರದ ರಜತ ಮಹೋತ್ಸವದ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಮನುಷ್ಯ ಜೀವನದಲ್ಲಿ ಧರ್ಮ, ಯಶಸ್ಸು, ನೀತಿ, ದಕ್ಷತೆ ಮತ್ತು ಒಳ್ಳೆಯ ಮಾತುಗಳನ್ನು ಅಳವಡಿಸಿಕೊಂಡು ಬಾಳಿದರೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ಆತ್ಮಸಾಕ್ಷಿ, ಉತ್ತಮ ಆರೋಗ್ಯ ಮತ್ತು ಸ್ವಾತಂತ್ರ್ಯ ಇವು ಮೂರು ಸಂತೋಷದ ಮೂಲಗಳು. ಗುರಿಯಿಲ್ಲದ, ಗುರಿ ಸಾಧಿಸದ ವ್ಯಕ್ತಿಯ ಬದುಕು ನಿರರ್ಥಕ. ಪ್ರಾಣ, ಯೌವನ, ಕಾಲ ಒಮ್ಮೆ ಕಳೆದರೆ ಮತ್ತೆಂದೂ ತಿರುಗಿ ಬರಲಾರವು. ಅಮೂಲ್ಯವಾದ ಜೀವ, ಉತ್ಸಾಹ ತುಂಬಿದ ತಾರುಣ್ಯ ಮತ್ತು ಸಮಯ ವ್ಯರ್ಥವಾಗಿ ಕಳೆಯದೇ ಸದುಪಯೋಗಪಡಿಸಿಕೊಳ್ಳಬೇಕೆಂದು ಸಿದ್ಧಾಂತ ಶಿಖಾಮಣಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಮೇಹಕರ ರಾಜೇಶ್ವರ ಶ್ರೀಗಳು ಅಜ್ಞಾನವೆಂಬ ಕತ್ತಲೆಯೊಳಗೆ ಭಕ್ತಿ ವಾತ್ಸಲ್ಯದ ದೀಪ ಹಚ್ಚಿ ಭಕ್ತ ಸಂಕುಲಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಅವರ ಚಿಂತನೆ ಮತ್ತು ಕ್ರಿಯಾಶೀಲ ಬದುಕು ಜೀವನದ ಉಜ್ವಲ ಭವಿಷ್ಯಕ್ಕೆ ಕಾರಣವಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.

ನೇತೃತ್ವ ವಹಿಸಿದ ಮೇಹಕರ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮ ಮೂಲ ಸಂಸ್ಕೃತಿ ಮರೆಯಬಾರದು. ಮೂಲ ಮರೆತರೆ ಬದುಕಿನಲ್ಲಿ ಸೋಲು ನಿಶ್ಚಿತ. ಮನಸ್ಸು ಪರಿಶುದ್ಧವಾಗಿದ್ದರೆ ಸಂತೋಷ ನೆರಳಿನಂತೆ ನಮ್ಮನ್ನು ಹಿಂಬಾಲಿಸುತ್ತದೆ. ಯಶಸ್ಸು ಪಡೆಯಲು ಸ್ನೇಹಿತರಿರಬೇಕು. ಉನ್ನತ ಸಾಧನೆಗಾಗಿ ಶತ್ರುಗಳಿರಬೇಕು. ಅಮೂಲ್ಯ ಜೀವನ ಸಮುದ್ರದಲ್ಲಿ ಮೀನು ಮೊಸಳೆಗಳಷ್ಟೇ ಅಲ್ಲ. ಅಪಾರ ಬೆಲೆ ಬಾಳುವ ಮುತ್ತು ರತ್ನಗಳಿವೆ ಎಂಬುದನ್ನು ಮರೆಯಬಾರದು. ಶ್ರೀ ಗುರುವಿನ ಹಾಗೂ ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದದ ಬಲದಿಂದ ಏನೆಲ್ಲ ಅದ್ಭುತ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ಹುಡುಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯರು, ಹಳ್ಳಿಖೇಡ ಪಂಡಿತಾರಾಧ್ಯ ಶಿವಾಚಾರ್ಯರು ಪಾಲ್ಗೊಂಡಿದ್ದರು. ಗೊರಟಾ ರೇವಣಸಿದ್ಧಯ್ಯನವರು, ಬಸವಕಲ್ಯಾಣದ ಸೋಮಶೇಖರ ವಸ್ತçದ, ದಯಾನಂದ ಶೀಲವಂತರ, ವೀರಣ್ಣ ಶೀಲವಂತರ, ಬಸವಂತಪ್ಪ ಲಾವಾರೆ, ರೇವಣಸಿದ್ಧಯ್ಯ, ರಮೇಶ ರಾಜೋಳಿ, ಕಲ್ಪನಾ, ವಿಜಯಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು. ಸಿದ್ವೀರಯ್ಯ ಹಿರೇಮಠ ನಿರೂಪಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಗಂಗಾಧರ ಹಿರೇಮಠ ಇವರಿಂದ ಭಕ್ತಿ ಗೀತೆ ಜರುಗಿತು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.

ಕೊಲ್ಲಾಪುರದ ಸ್ವಾಗತ ತೋಡಕರ್ ಮಾತನಾಡಿ, ಆಯುರ್ವೇದ ವಿಜ್ಞಾನಕ್ಕೆ ಮಹತ್ವದ ಸ್ಥಾನವಿದೆ. ಭಾರತೀಯ ಋಷಿ ಮುನಿಗಳು ಅಮೂಲ್ಯ ಜ್ಞಾನ ಸಂಪತ್ತನ್ನು ಕೊಟ್ಟಿದ್ದಾರೆ. ಆಯುರ್ವೇದ ಗಿಡ ಮೂಲಿಕೆಗಳಲ್ಲಿ ಅದ್ಭುತವಾದ ರೋಗ ನಿರೋಧಕ ಶಕ್ತಿಯಿದೆ. ರೋಗಮುಕ್ತರಾಗಿ ಬಾಳಲು ಆಯುರ್ವೇದ ಔಷಧಿಗಳನ್ನು ಬಳಸುವುದು ಉತ್ತಮ. ಎಲ್ಲ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತು ಅಮೂಲ್ಯವಾದುದೆಂದರು.


Spread the love

LEAVE A REPLY

Please enter your comment!
Please enter your name here