ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ರಾಮಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸಾಪೂರ ಇದುವರೆಗೂ ಮಜರೆ ಗ್ರಾಮವಾಗಿದ್ದು, ಇದು ಲಕ್ಷ್ಮೇಶ್ವರ ಐದು ಬಣಗಳಲ್ಲಿ ಒಂದಾದ ಹಿರೇಬಣ ವ್ಯಾಪ್ತಿಗೆ ಒಳಪಟ್ಟಿತ್ತು. ಅನೇಕ ವರ್ಷಗಳಿಂದ ಕಂದಾಯ ಗ್ರಾಮವನ್ನಾಗಿ ಮಾಡಲು ಈ ಗ್ರಾಮದ ಸಾರ್ವಜನಿಕರ ಬೇಡಿಕೆಯು ಇದೀಗ ಈಡೇರಿದೆ. ಹೊಸಪೇಟೆಯಲ್ಲಿ ಮಂಗಳವಾರ ನಡೆದ ಸರಕಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಕಂದಾಯ ಗ್ರಾಮವಾಗಿ ಹಕ್ಕುಪತ್ರಗಳನ್ನು ಪಡೆದ ಗ್ರಾಮಸ್ಥರಲ್ಲಿ ಹರ್ಷ ಮನೆಮಾಡಿದೆ.
ಬಸಾಪೂರ ಗ್ರಾಮದಲ್ಲಿ ಒಟ್ಟು 78 ಕುಟುಂಬಗಳಿದ್ದು, ಈ ಎಲ್ಲಾ ಕುಟುಂಬಗಳಿಗೆ ಇನ್ನು ಮುಂದೆ ಪಹಣಿ ಸೇರಿದಂತೆ ಸರಕಾರದ ಎಲ್ಲಾ ದಾಖಲೆಗಳಲ್ಲಿ ಕಂದಾಯ ಗ್ರಾಮ ಎಂದು ನಮೂದಿಸಲ್ಪಡುತ್ತದೆ. ಕಂದಾಯ ಇಲಾಖೆಯೂ ಈ ಗ್ರಾಮದ ಸಂಪೂರ್ಣ ಸಮೀಕ್ಷೆ, ಸರ್ವೇ ಮಾಡಿ ಎಲ್ಲಾ ದೃಷ್ಟಿಕೋನದಿಂದ ಈ ಗ್ರಾಮವನ್ನು ಕಂದಾಯ ಗ್ರಾಮ ಎಂದು ಘೋಷಿಸಲು ತಹಸೀಲ್ದಾರ ವಾಸುದೇವ ವಿ.ಸ್ವಾಮಿ ಸೇರಿದಂತೆ ಎಲ್ಲಾ ತಹಸೀಲ್ದಾರರು ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಸರಕಾರ ಅನುಮೋದಿಸಿ 78 ಕುಟುಂಬಗಳಿರುವ ಈ ಮಜರೆ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸುವ ಮೂಲಕ ಈ ಜನರ ಬಹು ದಿನಗಳ ಕನಸು ನನಸಾಗಿದೆ.
ಮಂಗಳವಾರ ಹೊಸಪೇಟೆಯಲ್ಲಿ ಜರುಗಿದ ಸರಕಾರದ ಎರಡು ವರ್ಷಗಳ ಸಾಧನಾ ಸಮಾವೇಶ ಸಮರ್ಪಣೆ ಸಂಕಲ್ಪ ಕಾರ್ಯಕ್ರಮದಲ್ಲಿ ಈ 78 ಕುಟುಂಬಗಳು ಕಂದಾಯ ಗ್ರಾಮ ಹಕ್ಕುಪತ್ರವನ್ನು ಮುಖ್ಯಮಂತ್ರಿ ಸಿದ್ದರಾಯ್ಯ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಂದ ಪಡೆಯುವ ಮೂಲಕ ಬಹುವರ್ಷಗಳ ಕನಸು ನನಸಾಗಿರುವ ಬಗ್ಗೆ ಸಂಭ್ರಮ, ಹರ್ಷ ವ್ಯಕ್ತಪಡಿಸಿದ ಗ್ರಾಮಸ್ಥರು ತಮ್ಮ ಅನೇಕ ವರ್ಷಗಳ ಕನಸು ನನಸಾಗಿರುವುದು ಸಂತಸ ತಂದಿದೆ. ಇನ್ನು ಮುಂದೆ ಇ-ಸ್ವತ್ತು, ಪಹಣಿ ಪತ್ರಿಕೆ ಸೇರಿದಂತೆ ಸರಕಾರದ ಎಲ್ಲಾ ಇಲಾಖೆಗಳ ದಾಖಲೆಗಳಲ್ಲಿ ಕಂದಾಯ ಗ್ರಾಮ ಆಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕರ್ನಾಟಕ ಭೂ ಕಂದಾಯ ಕಾನೂನು 1964ರ ಅಡಿ ಉಪ ಕಲಂ 94ಡಿ ಇದರ ಅನ್ವಯ ಸರಕಾರಕ್ಕೆ ಇದನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸುವಂತೆ ಮನವಿ ಸಲ್ಲಿಸಲಾಗಿತ್ತು. ಈಗ ಬಸಾಪೂರ ಕಂದಾಯ ಗ್ರಾಮವಾಗಿ ಘೋಷಿಸಲಪಟ್ಟಿದ್ದು, ಹೊಸಪೇಟೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಂದ ಅಧಿಕೃತ ಘೋಷಣೆ ಮಾಡುವದರ ಜೊತೆಗೆ ಹಕ್ಕುಪತ್ರಗಳನ್ನು ವಿತರಿಸಿದ್ದು, ನಮ್ಮ ತಾಲೂಕಿನಲ್ಲಿ ಇದೊಂದು ಮೈಲಿಗಲ್ಲಾಗಿದೆ.
– ವಾಸುದೇವ ವಿ.ಸ್ವಾಮಿ.
ಲಕ್ಷ್ಮೇಶ್ವರ, ತಹಸೀಲ್ದಾರರು.


