ಬೆಂಗಳೂರು:- ಮೆಟ್ರೋ ಪ್ರಯಾಣಿಕರು ಇದು ನೋಡಲೇಬೇಕಾದ ಸ್ಟೋರಿ. ಶುಕ್ರವಾರ ಅಂದ್ರೆ ನಾಳೆ ರೈಲು ಸಂಚಾರ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು BMRCL ಸ್ಪಷ್ಟನೆ ಕೊಟ್ಟಿದೆ.
23ರ ಮೇ 2025 ರಂದು ಬೆಂಗಳೂರಿನಲ್ಲಿ ನಡೆಯಬೇಕಾಗಿದ್ದ ಐಪಿಎಲ್ ಪಂದ್ಯವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಲಖನೌದಲ್ಲಿ ನಡೆಸಲಿದ್ದು, ಈ ಹಿಂದೆ ಪ್ರಕಟಿಸಿದಂತೆ ಮೇ 23, 2025 ರಂದು ರಾತ್ರಿ 1:30 ರವರೆಗೆ ವಿಸ್ತರಿಸಿದ ಮೆಟ್ರೋ ರೈಲು ಸೇವೆಯನ್ನು ರದ್ದುಪಡಿಸಲಾಗಿದೆ ಎಂದು ಬಿಎಂಆರ್ಸಿಎಲ್ ಪ್ರಕಟಣೆ ತಿಳಿಸಿದೆ. ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲುಗಳು ಎಂದಿನಂತೆ ಸಾಮಾನ್ಯ ಸೇವೆ ಒದಗಿಸಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಬೆಂಗಳೂರಿನಲ್ಲಿ ಮಳೆ ಮುನ್ಸೂಚನೆ ಇರುವ ಕಾರಣ ಮೇ 23ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಸನ್ರೈಸರ್ಸ್ ಹೈದರಾಬಾದ್ ಹಾಗೂ ಆರ್ಸಿಬಿ ನಡುವಣ ಪಂದ್ಯವನ್ನು ಲಖನೌಗೆ ಸ್ಥಳಾಂತರ ಮಾಡಲಾಗಿದೆ. ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಆರ್ಸಿಬಿ ಹಾಗೂ ಕೆಕೆಆರ್ ಪಂದ್ಯ ಮಳೆಯಿಂದ ರದ್ದಾಗಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ಮುಂದಿನ ಪಂದ್ಯ ಸ್ಥಳಾಂತರ ಮಾಡುವ ನಿರ್ಧಾರ ಕೈಗೊಂಡಿತ್ತು.
ಈ ವರ್ಷದ ಐಪಿಎಲ್ ಟೂರ್ನಿ ಆರಂಭವಾಗುವ ಸಂದರ್ಭದಲ್ಲೇ ಬಿಎಂಆರ್ಸಿಎಲ್ ಪ್ರಕಟಣೆ ಹೊರಡಿಸಿ, ಐಪಿಎಲ್ ಪಂದ್ಯಗಳಿರುವ ದಿನಗಳಂದು ಮೆಟ್ರೋ ಸೇವೆ ವಿಸ್ತರಿಸುವುದಾಗಿ ತಿಳಿಸಿತ್ತು. ಆದ್ರೆ ಬೆಂಗಳೂರಿನಲ್ಲಿ ಪಂದ್ಯ ರದ್ದಾಗಿರುವ ಹಿನ್ನೆಲೆ ರೈಲು ಸಂಚಾರದ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು BMRCL ಸ್ಪಷ್ಟನೆ ಕೊಟ್ಟಿದೆ.