ಬೆಂಗಳೂರು:- ಕ್ಯಾನ್ಸರ್ ರೋಗಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದಂತೆ ಸಚಿವ ದಿನೇಶ್ ಗುಂಡೂರಾವ್ ಅವರು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ.
ಈ ಬಗ್ಗೆ ದಿನೇಶ್ ಗುಂಡೂರಾವ್ ಬೆಂಗಳೂರಿನಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಪ್ರತಿ ವರ್ಷ ಸುಮಾರು 70,000 ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿವೆ. ಆದರೆ, ರಾಜ್ಯದ ಎಲ್ಲಾ ಕಡೆಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಅಗತ್ಯವಾದ ಸೌಲಭ್ಯಗಳು ಲಭ್ಯವಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ರೋಗಿಗಳಿಗೆ ದೊಡ್ಡ ಮೊತ್ತದ ಹಣ ವೆಚ್ಚವಾಗುತ್ತದೆ, ಇದು ಸಾಮಾನ್ಯ ಜನರಿಗೆ ಸ್ವಲ್ಪ ಮಟ್ಟಿಗೆ ಕಷ್ಟವಾಗುತ್ತದೆ. ಸುಮಾರು 60% ರಷ್ಟು ರೋಗಿಗಳು ಕ್ಯಾನ್ಸರ್ ಚಿಕಿತ್ಸೆಗಾಗಿ 100 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ ಪ್ರಯಾಣಿಸಬೇಕಾಗಿದೆ, ಇದರಿಂದ ಆರ್ಥಿಕ ಹೊರೆಯ ಜೊತೆಗೆ ದೈಹಿಕ ಮತ್ತು ಮಾನಸಿಕ ತೊಂದರೆಯೂ ಉಂಟಾಗುತ್ತದೆ. ಈ ಎಲ್ಲಾ ಕಾರಣಗಳಿಗಾಗಿ ಇದೀಗ ಆರೋಗ್ಯ ಇಲಾಖೆ ಕ್ಯಾನ್ಸರ್ ರೋಗಿಗಳಿಗೆ ಹೊಸ ಕ್ರಮವನ್ನು ಜಾರಿಗೆ ತರಲು ನಿರ್ಧರಿಸಿದೆ.
ಕ್ಯಾನ್ಸರ್ ರೋಗಿಗಳ ಈ ಸಮಸ್ಯೆಗೆ ಪರಿಹಾರವಾಗಿ, ಆರೋಗ್ಯ ಇಲಾಖೆಯು ರಾಜ್ಯದ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಕೀಮೋಥೆರಪಿ ಡೇ ಕೇರ್ ಕೇಂದ್ರಗಳನ್ನು ಆರಂಭಿಸುವ ನಿರ್ಧಾರ ಕೈಗೊಂಡಿದೆ. ಈ ಕೇಂದ್ರಗಳಲ್ಲಿ ಕೀಮೋಥೆರಪಿ ಚಿಕಿತ್ಸೆಯ ಜೊತೆಗೆ ಆಪ್ತ ಸಮಾಲೋಚನೆ, ಮೆಡಿಕಲ್ ಆಂಕಾಲಜಿಸ್ಟ್‌ಗಳ ಸೇವೆ, ವೈದ್ಯರು, ಫಾರ್ಮಾಸಿ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ಸೌಲಭ್ಯವಿರುತ್ತದೆ. ಈ ಉಪಕ್ರಮವು ಕಳೆದ ಬಜೆಟ್‌ನಲ್ಲಿ ಘೋಷಿತವಾಗಿದ್ದು, ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ಈ ಕೀಮೋಥೆರಪಿ ಕೇಂದ್ರಗಳನ್ನು “ಹಬ್ ಮತ್ತು ಸ್ಪೋಕ್” ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಮಾದರಿಯಲ್ಲಿ, ಪ್ರಮುಖ ಆಸ್ಪತ್ರೆಗಳು (ಹಬ್) ಕೇಂದ್ರೀಕೃತ ಚಿಕಿತ್ಸೆ ಮತ್ತು ತಜ್ಞರ ಸೇವೆಯನ್ನು ಒದಗಿಸಿದರೆ, ಸ್ಥಳೀಯ ಜಿಲ್ಲಾ ಆಸ್ಪತ್ರೆಗಳು (ಸ್ಪೋಕ್) ಕೀಮೋಥೆರಪಿ ಮತ್ತು ಇತರ ಮೂಲಭೂತ ಚಿಕಿತ್ಸೆಗಳನ್ನು ಒದಗಿಸುತ್ತವೆ. ಇದರಿಂದ ರೋಗಿಗಳು ತಮ್ಮ ಸಮೀಪದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುವುದರ ಜೊತೆಗೆ, ತಜ್ಞರ ಸಲಹೆ ಮತ್ತು ಉನ್ನತ ಚಿಕಿತ್ಸೆಗೆ ಹಬ್‌ಗಳೊಂದಿಗೆ ಸಂಪರ್ಕವೂ ಸಾಧ್ಯವಾಗುತ್ತದೆ.
ಈ ಉಪಕ್ರಮದ ಭಾಗವಾಗಿ ಶುಕ್ರವಾರ ಮೊದಲ ಕೀಮೋಥೆರಪಿ ಡೇ ಕೇರ್ ಕೇಂದ್ರವನ್ನು ಉದ್ಘಾಟಿಸಲಾಗುವುದು. ಈ ಕೇಂದ್ರವು ಕ್ಯಾನ್ಸರ್ ರೋಗಿಗಳಿಗೆ ಸ್ಥಳೀಯವಾಗಿ ಚಿಕಿತ್ಸೆಯನ್ನು ಒದಗಿಸುವ ಮೂಲಕ ಅವರ ಆರ್ಥಿಕ ಮತ್ತು ದೈಹಿಕ ಒತ್ತಡವನ್ನು ಕಡಿಮೆ ಮಾಡಲಿದೆ. ಇದೇ ಮಾದರಿಯಲ್ಲಿ ರಾಜ್ಯದ ಇತರ 15 ಜಿಲ್ಲಾ ಆಸ್ಪತ್ರೆಗಳಲ್ಲಿಯೂ ಕೇಂದ್ರಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.