ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಇನ್ನೂ ಟೇಕಾಫ್ ಆಗಿಲ್ಲ. ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಇದು ಪಾಪದ ಸರ್ಕಾರ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್.ಗೋವಿಂದಗೌಡ್ರ ಟೀಕಿಸಿದರು.
ಅವರು ರಾಜ್ಯ ಸರ್ಕಾರದ ಎರಡು ವರ್ಷದ ವೈಫಲ್ಯದ ಭಿತ್ತಿಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿ, ಗ್ಯಾರಂಟಿ ಗ್ಯಾರಂಟಿ ಎಂದು ರಾಜ್ಯದ ಜನತೆಗೆ ಮೋಸ ಮಾಡಿ ಅಧಿಕಾರಕ್ಕೆ ಬಂದು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವ ಸರ್ಕಾರವಿದು. ಆ ಹಗರಣ-ಈ ಹಗರಣ ಎಂದು ಎರಡು ವರ್ಷ ಕಳೆದಿರುವ ಈ ಸರ್ಕಾರ ರಾಜ್ಯದ ಜನತೆಗೆ ಬೆಲೆ ಏರಿಕೆಯ ಹೊರೆಯನ್ನು ಹೊರಿಸಿ ರಾಜ್ಯದ ಜನತೆಯ ಪಾಲಿಗೆ ಶಾಪವಾಗಿ ಪರಿಣಮಿಸಿದೆ ಎಂದರು.
ಕಾನೂನು ಘಟಕದ ಗದಗ ಜಿಲ್ಲಾ ಅಧ್ಯಕ್ಷ ಜೋಸೆಫ್ ಉದೋಜಿ ಮಾತನಾಡಿ, ಇನ್ನಾದರೂ ರಾಜ್ಯ ಸರ್ಕಾರ ಜನರ ಪರ ಕೆಲಸ ಮಾಡಬೇಕು. ಇಲ್ಲದಿದ್ದರೆ ಜನತೆ ದಂಗೆ ಏಳುತ್ತಾರೆ ಎಂದರು.
ಗದಗ ತಾಲೂಕಾಧ್ಯಕ್ಷ ಬಸವರಾಜ್ ಅಪ್ಪಣ್ಣವರ ಮಾತನಾಡಿ, ರಾಜ್ಯದ ಜನರು ಮುಗ್ಧರಿದ್ದಾರೆ. ಅವರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದು ಜನರನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದರು.
ಈ ಸಂದರ್ಭದಲ್ಲಿ ರಮೇಶ್ ಹುಣಸಿಮರದ, ಸಂತೋಷ್ ಪಾಟೀಲ, ಪ್ರಫುಲ್ ಪುಣೆಕರ, ಎಂ.ಎಸ್. ಪರ್ವತಗೌಡ್ರ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.


