ಬೆಂಗಳೂರು: ಮೈಸೂರ್ ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಬಹುಭಾಷಾ ನಟಿ ತಮನ್ನಾ ಅವರನ್ನು ಸರ್ಕಾರ ಆಯ್ಕೆ ಮಾಡಿದೆ. ನಟಿಯ ಆಯ್ಕೆ ಹಾಗೂ ಆಕೆಗೆ ನೀಡಲಾಗಿರುವ ದುಬಾರಿ ಸಂಭಾವನೆ ಕುರಿತು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದ ಈ ನಡೆಗೆ ಕನ್ನಡ ಚಿತ್ರರಂಗದ ಕಲಾವಿದರೂ ಬೇಸರ ಹೊರಹಾಕಿದ್ದಾರೆ. ಅಂತೆಯೇ ಇದೀಗ ಕನ್ನಡ ಚಿತ್ರರಂಗದ ಖ್ಯಾತ ನಟಿ, ಮಾಜಿ ಸಂಸದೆ ರಮ್ಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಈ ಬಗ್ಗೆ ಸ್ಟೋರಿ ಹಂಚಿಕೊಂಡಿರುವ ನಟಿ ರಮ್ಯಾ, ಇಂದಿನ ಆಧುನಿಕ ಯುಗದಲ್ಲಿ, ಮಾಹಿತಿಯೊಂದನ್ನು ಜನರಿಗೆ ತಲುಪಿಸಲು ಹಲವು ವಿವಿಧ ಕ್ರಿಯಾಶೀಲ ದಾರಿಗಳಿವೆ. ಪ್ರಾಡಕ್ಟ್ ಒಂದನ್ನು ಜನರಿಗೆ ತಲುಪಿಸಲು ಅದಕ್ಕೆ ಸೆಲೆಬ್ರಿಟಿಯೊಬ್ಬರನ್ನು ಆಯ್ಕೆ ಮಾಡಿ ಅವರ ಮೂಲಕವೇ ಪ್ರಚಾರ ಮಾಡಬೇಕು ಎಂಬುದು ಬಹಳ ಹಳೆಯ ಮಾದರಿಯ ಯೋಜನೆ ಮಾತ್ರವಲ್ಲದೆ ಇದು ತೆರಿಗೆದಾರರ ಹಣವನ್ನು ಪೋಲು ಮಾಡಿದಂತೆ’ ಎಂದಿದ್ದಾರೆ.
ಜನ ಇಂದು ಯಾರೋ ಸೆಲೆಬ್ರಿಟಿ ಪ್ರಚಾರ ಮಾಡಿದ್ದಾರೆ ಎಂಬ ಕಾರಣಕ್ಕೆ ಸೋಪನ್ನು ಖರೀದಿಸುವುದಿಲ್ಲ. ಅವರಿಗೆ ಚೆನ್ನಾಗಿ ಗೊತ್ತಿದೆ. ಆ ಸೋಪು ಬಳಸಿದರೆ ಪ್ರಚಾರ ಮಾಡಿದ ಸೆಲೆಬ್ರಿಟಿ ರೀತಿ ನಾನು ಆಗುವುದಿಲ್ಲ ಎಂದು. ಪ್ರಾಡೆಕ್ಟ್ ಚೆನ್ನಾಗಿದ್ದರೆ ಬಳಕೆದಾರರು ನಂಬಿಕಸ್ತ ಗ್ರಾಹಕರಾಗುತ್ತಾರೆ. ಮೈಸೂರು ಸ್ಯಾಂಡಲ್ ಎಂಬುದು ಒಂದೊಳ್ಳೆ ಪ್ರಾಡಕ್ಟ್ ಮಾತ್ರವೇ ಅಲ್ಲ, ಇತಿಹಾಸವನ್ನು ಹೊಂದಿರುವ ಪ್ರಾಡಕ್ಟ್ ಆಗಿದೆ. ಹಾಗಾಗಿ ಅದಕ್ಕೆ ಲಾಯಲ್ ಗ್ರಾಹಕರು ಇದ್ದಾರೆ’ ಎಂದು ನಟಿ ರಮ್ಯಾ ಬರೆದುಕೊಂಡಿದ್ದಾರೆ.