ವಿಜಯಸಾಕ್ಷಿ ಸುದ್ದಿ, ಗದಗ: ಸಭಾಪತಿ ಬಸವರಾಜ ಹೊರಟ್ಟಿ ದಂಪತಿಗಳು ದತ್ತು ಪಡೆದ ಸಿದ್ದಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯ ಸಮಗ್ರ ಮಾಹಿತಿಯುಳ್ಳ ಕಿರು ಕರಪತ್ರಿಕೆಯನ್ನು ದತ್ತು ಉಸ್ತುವಾರಿ ಡಾ. ಬಸವರಾಜ್ ಧಾರವಾಡ ಅವರಿಂದ ಧಾರವಾಡದ ಅಪರ ಆಯುಕ್ತರ ಕಚೇರಿಯ ಆಯುಕ್ತರಾದ ಜಯಶ್ರೀ ಶಿಂತ್ರಿ, ನಿರ್ದೇಶಕರಾದ ಈಶ್ವರ ನಾಯಕ, ಸಹಾಯಕ ನಿರ್ದೇಶಕರಾದ ಶ್ಯಾಮಲಾ ಎಸ್.ಹೆಚ್. ಸ್ವೀಕರಿಸಿ ಶಾಲೆ ಅಭಿವೃದ್ಧಿಗೊಂಡ ಕುರಿತು ಸಂತಸ ಹಂಚಿಕೊಂಡರು.
ಗದುಗಿನ ಸಿದ್ದಲಿಂಗ ನಗರದ ಸರಕಾರಿ ಪ್ರೌಢಶಾಲೆ ಬಸವರಾಜ ಹೊರಟ್ಟಿ ಅವರ ಸಹಕಾರದಿಂದ ಕೇವಲ ಎರಡು ವರ್ಷಗಳಲ್ಲಿ ಅಮೂಲಾಗ್ರಹ ಬದಲಾವಣೆಯಾಗುವ ಮೂಲಕ ಎಲ್ಲ ಮೂಲಭೂತ ಸೌಕರ್ಯಗಳನ್ನು ಹೊಂದಿ ತನ್ನ ಕಳೆಯನ್ನ ಹೆಚ್ಚಿಸಿಕೊಂಡು ನೂರಾರು ಬಡ, ಮಧ್ಯಮ, ಗ್ರಾಮೀಣ ವಿದ್ಯಾರ್ಥಿಗಳಿಗೆ ಅಕ್ಷರ ಕಲಿಕೆಗೆ ಅವಕಾಶ ಕಲ್ಪಿಸಿ, ಅವರ ಕನಸುಗಳಿಗೆ ಬಣ್ಣ ತುಂಬುತ್ತಿರುವುದು ಹೆಮ್ಮೆಯ ಸಂಗತಿ. ಯಾವ ಖಾಸಗಿ ಶಾಲೆಗಳಿಗಿಂತಲೂ ಈ ಸರ್ಕಾರಿ ಪ್ರೌಢಶಾಲೆ ಕಡಿಮೆ ಇಲ್ಲ ಎನ್ನುವಂತೆ ಎಲ್ಲ ಶಾಲೆಗಳಿಗೂ ಮಾದರಿಯಾಗಿದೆ. ಇದಕ್ಕೆ ಕಾರಣೀಕರ್ತರಾದ ಬಸವರಾಜ್ ಹೊರಟ್ಟಿ ದಂಪತಿಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪರವಾಗಿ ಅಭಿನಂದಿಸುವುದಾಗಿ ಹೇಳಿದರು.


