ಬೆಂಗಳೂರು: ಈ ವರ್ಷ ವಾಡಿಕೆಗಿಂತ ಬರೋಬ್ಬರಿ 15 ದಿನ ಮೊದಲೇ ರಾಜ್ಯಕ್ಕೆ ಮುಂಗಾರು ಆಗಮಿಸಿದೆ. ಧಾರಾಕಾರವಾಗಿ ಸುರಿದ ಮಳೆಗೆ ಅವಾಂತರ ಸೃಷ್ಟಿಯಾಗುತ್ತಿದೆ. ಇನ್ನೂ ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಮಳೆ ಮುಂದುವರೆಯಲಿದ್ದು, 6 ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಮಳೆಯಾಗುತ್ತಿದೆ. ಇದರಿಂದ ಮೇ 30ರವರೆಗೆ ಮಳೆ ಮುಂದುವರೆಯಲಿದೆ. ಮುಂದಿನ ನಾಲ್ಕು ದಿನಗಳ ವರೆಗೆ ರಾಜ್ಯದ ಬಹುತೇಕ ಭಾಗಗಳಲ್ಲಿ ಭಾರೀ ಮಳೆ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಮಳೆ ಹೆಚ್ಚಳವಾಗುವ ಸಾಧ್ಯತೆ ಇದ್ದು, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಗೆ ಐದು ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೀದರ್, ಕಲಬುರಗಿ, ಯಾದಗಿರಿ ವಿಜಯಪುರ ಬೆಳಗಾವಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಮಂಗಳೂರಿನ ಅಡ್ಯಾರ್ ಗ್ರಾಮದ ಜನರು ಪರದಾಡುತ್ತಿದ್ದಾರೆ. ಮಳೆಯಿಂದ ಚರಂಡಿಯಲ್ಲಿ ಹರಿಯುವ ನೀರು ಬಾವಿ ಸೇರುತ್ತಿದೆ. ಇದರಿಂದ ಗ್ರಾಮದ ಜನ ಉಪಯೋಗಿಸುವ ಬಾವಿಯ ನೀರೂ ಕಲುಷಿತವಾಗಿದೆ.