ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಪೌರ ನೌಕರರನ್ನು ಬೆಂಬಲಿಸಿ ಪಟ್ಟಣದ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನೌಕರರೊಡನೆ ದಿನ ನಿತ್ಯದ ಕೆಲಸ, ಕಾರ್ಯಗಳನ್ನು ತ್ಯಜಿಸಿ ಮುಷ್ಕರದಲ್ಲಿ ಪಾಲ್ಗೊಂಡರು.
ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಜಿಲ್ಲಾಧ್ಯಕ್ಷ ರಮೇಶ ಹಲಗಿಯವ ಮಾತನಾಡಿ, ರಾಜ್ಯದಲ್ಲಿ ಹಲವು ದಶಕಗಳಿಂದ ಪೌರಸೇವಾ ನೌಕರರು ಮಹಾನಗರ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇದು ಅಲ್ಲದೆ, ಈಗಾಗಲೇ ದೇಶಾದ್ಯಂತ ಮಹಾಮಾರಿ ಕೊರೋನಾದ ಸಂದರ್ಭದಲ್ಲಿ ನಮ್ಮ ಪೌರಸೇವಾ ನೌಕರರು ತಮ್ಮ ಜೀವದ ಹಂಗು ತೊರೆದು ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಇವರ ಕಾಯಕ ದೇಶ ಕಾಯುವ ಸೈನಿಕರಂತೆ. ಆದ್ದರಿಂದ ಸರ್ಕಾರ ಈ ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದರು.
ಕ.ರಾ.ಪೌ.ನೌ ಸಂಘದ ಶಾಖಾಧ್ಯಕ್ಷ ನೀಲಪ್ಪ ಚಳ್ಳಮರದ, ಉಪಾಧ್ಯಕ್ಷ ಶಂಕ್ರಪ್ಪ ದೊಡ್ಡಣ್ಣವರ, ಜಿಲ್ಲಾ ನಿರ್ದೇಶಕ ಎಂ.ಎಚ್. ಸೀತಿಮನಿ, ಎ.ಎಸ್. ಮೆಣಸಗಿ, ಆರೀಫ ಮಿರ್ಜಾ, ಬಸವರಾಜ ಮಾಳವಾಡ, ಎಂ.ಎಸ್. ಹಿರೇವಡೇಯರ, ದುರಪ್ಪ ಪಾದಗಟ್ಟಿ, ಮಹಾದೇವ ಮ್ಯಾಗೇರಿ, ಸಿ.ವಿ. ಹೊನ್ನವಾಡ, ನಜಮಾ ಬೇಲೇರಿ, ಮಾರುತಿ ಚಲವಾದಿ, ಎಲ್ ರಕ್ಷತ, ಉದಯ ಮುದೇನಗುಡಿ, ಸಂಜು ಗುಡಿಮನಿ, ಫಕೀರೇಶ ತಮ್ಮಣ್ಣವರ, ನಿಂಗಪ್ಪ ಮಡಿವಾಳರ, ಪರಶುರಾಮ ನಡವಲಕೇರಿ, ಗುರುಲಿಂಗಪ್ಪ ರ‍್ಯಾದಮಠ, ಗೈಬುಸಾಬ ಇದ್ಲಿ, ಜೆ.ಡಿ. ಬಂಕಾಪೂರ, ಕಾವ್ಯಾ ಅರವಟಗಿಮಠ, ನಿರ್ಮಲಾ ಕಡೆತೋಟದ, ಕುಮಾರ ನಡವಲಕೇರಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ರಾಜ್ಯದ ಎಲ್ಲ ನಗರ, ಸ್ಥಳೀಯ ಸಂಸ್ಥೆ ನೌಕರರನ್ನು ರಾಜ್ಯ ಸರ್ಕಾರಿ ನೌಕರ‍್ನಾಗಿ ಪರಿಗಣಿವುದರೊಂದಿಗೆ ಸಂಜೀವಿನಿ, ಕೆಜಿಐಡಿ ಸೇರಿದಂತೆ ಸರ್ಕಾರಿ ನೌಕರರು ಪಡೆಯುವ ಎಲ್ಲ ಸೌಲಭ್ಯಗಳನ್ನು ನೀಡಬೇಕು. ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜು, ಚಾಲಕರು, ಲೋಡರ್ಸ್, ಕ್ಲೀನರ್ಸ್, ಸ್ಯಾನಿಟರಿ ಸೂಪರ್‌ವೈಜರ್, ಯುಜಿಡಿ ಸಹಾಯಕರು ಸೇರಿದಂತೆ ವಿವಿಧ ವೃಂದದ ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು. ದಿನಗೂಲಿ, ಕ್ಷೇಮಾಭಿವೃದ್ಧಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದರ ಜೊತೆಗೆ ನೌಕರರನ್ನು ಕಾಯಂಗೊಳಿಸಬೇಕು ಇವೇ ಮುಂತಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.