ಗಣಿತ ಕಲಿಕೆಗೆ ಪ್ರಯೋಗಾಲಯ ಸಹಕಾರಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗಣಿತ ವಿಷಯವನ್ನು ಅತ್ಯಂತ ಸರಳವಾಗಿ ಕಲಿಯಲು ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಸ್ಥಾಪಿಸಿದ ಶ್ರೀಮತಿ ಹೇಮಲತಾ ಬಸವರಾಜ ಹೊರಟ್ಟಿ ಗಣಿತ ಪ್ರಯೋಗಾಲಯ ಹಾಗೂ ಸಂಶೋಧನಾ ಕೇಂದ್ರ ಉಪಯುಕ್ತವಾಗಿದೆ ಎಂದು ಗದಗ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಹೇಳಿದರು.

Advertisement

ಅವರು ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸರ್ಕಾರದ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಹತ್ವಾಂಕಾಕ್ಷಿ ಯೋಜನೆಯಾದ `ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಗಣಿತ ಪ್ರಯೋಗಾಲಯ ಹಾಗೂ ಸಂಶೋಧನಾ ಕೇಂದ್ರವನ್ನು ವೀಕ್ಷಿಸಿ ಮಾತನಾಡಿದರು.

ಸರಕಾರಿ ಪ್ರೌಢಶಾಲಾ ಹಂತದಲ್ಲಿ ಜಿಲ್ಲೆಯಲ್ಲಿಯೇ ಮೊದಲ ಗಣಿತ ಪ್ರಯೋಗಾಲಯ ಇದಾಗಿರುವುದು ಹೆಮ್ಮೆಯ ವಿಷಯ. 120ಕ್ಕೂ ಹೆಚ್ಚು ಮಾದರಿಗಳು ಇಲ್ಲಿ ಇದ್ದು, ಅವುಗಳ ಮೂಲಕ ಸರಳ ಗಣಿತ ಕಲಿಕೆಗೆ ಸಹಕಾರಿಯಾಗಿದೆ. ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಡಾ.ವೀರಣ್ಣ ಬೋಳಿಶೆಟ್ಟಿ ಇವರ ಸಹಕಾರದೊಂದಿಗೆ ನಿರ್ಮಾಣಗೊಂಡ ಈ ಗಣಿತ ಪ್ರಯೋಗಾಲಯ ಅತ್ಯಂತ ಉತ್ಕೃಷ್ಟ ಮಟ್ಟದ ಪ್ರಯೋಗಾಲಯವಾಗಿರುವುದರಿಂದ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಹೇಳಿದರು.

ಶಾಲಾ ಉಸ್ತುವಾರಿ ಡಾ. ಬಸವರಾಜ ಧಾರವಾಡ ಮಾತನಾಡಿ, ಬಸವರಾಜ ಹೊರಟ್ಟಿ ದಂಪತಿಗಳಿಂದ ಎಲ್ಲ ರೀತಿಯ ಸಹಕಾರ ಈ ಶಾಲೆಗೆ ಸಿಕ್ಕಿದೆ. ಇದೊಂದು ಮಾದರಿ ಶಾಲೆಯಾಗಿ ಬೆಳೆಯುತ್ತಿರುವುದರಿಂದ ಅದರ ಸದುಪಯೋಗವನ್ನು ಇಲ್ಲಿನ ವಿದ್ಯಾರ್ಥಿಗಳು ಮಾಡಿಕೊಳ್ಳಲು ವಿನಂತಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ವ್ಹಿ. ಶೆಟ್ಟೆಪ್ಪನವರ, ನಗರಸಭೆ ಸದಸ್ಯೆ ವಿದ್ಯಾ ಗಡಗಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ನಂದಾ ಖಟವಟೆ, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಾದ ಸರಸ್ವತಿ ಕನವಳ್ಳಿ, ರವಿಪ್ರಕಾಶ, ಎಂ.ಎಸ್. ಕಂಬಳಿ, ಶಿವಕುಮಾರ ಕುರಿ, ಅರವಟಗಿ, ಶಂಕರ ಹಡಗಲಿ, ಎಸ್.ಡಿ. ಪ್ರಭಯ್ಯನಮಠ, ಜೆ.ಬಿ. ಅಣ್ಣಿಗೇರಿ, ಬಿ.ಎಸ್. ಯರಗುಡಿ ಮುಂತಾದವರು ಉಪಸ್ಥಿತರಿದ್ದರು.

ಸಾ.ಶಿ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರಡಿ ಗಣಿತ ಪ್ರಯೋಗಾಲಯ ಕುರಿತು ಮಾಹಿತಿ ನೀಡಿ, ಈ ಶಾಲೆಯ ಸಂಪೂರ್ಣ ಅಭಿವೃದ್ಧಿಗೆ ಬಸವರಾಜ ಹೊರಟ್ಟಿಯವರೊಂದಿಗೆ ಅವರ ಧರ್ಮಪತ್ನಿಯವರಾದ ಶ್ರೀಮತಿ ಹೇಮಲತಾ ಹೊರಟ್ಟಿಯವರು ಕೂಡಾ ಅವ್ವ ಸೇವಾ ಟ್ರಸ್ಟ್ ಮೂಲಕ ಎಲ್ಲ ರೀತಿಯಿಂದ ಸಹಕಾರ ಮಾಡಿ ಈ ಗಣಿತ ಪ್ರಯೋಗಾಲಯ ಸ್ಥಾಪನೆಗೆ ಶ್ರಮಿಸಿದ್ದಾರೆ. ಹೀಗಾಗಿ ಸಾ.ಶಿ.ಇಲಾಖೆ ಪರವಾಗಿ ಅವರಿಗೆ ಅಭಿನಂದಿಸುವುದಾಗಿ ಹೇಳಿದರು. ಇಲ್ಲಿಯ ಮಾದರಿಗಳು ರಾಜ್ಯ ಮಟ್ಟದ ಗಣಿತ ಪರಿಣಿತರಿಂದ ಪರೀಕ್ಷಿಸಿ ಇಲ್ಲಿ ಸ್ಥಾಪಿಸಲಾಗಿದೆ. ಅತ್ಯಂತ ಉಪಯುಕ್ತವಾದ ಈ ಮಾದರಿಗಳು ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚು ಸಹಕಾರಿಯಾಗಿವೆ ಎಂದರು.


Spread the love

LEAVE A REPLY

Please enter your comment!
Please enter your name here