ತಮಿಳು ನಟ ಕಮಲ್ ಹಾಸನ್ ಶಿವಣ್ಣನ ಮುಂದೆಯೇ ‘ತಮಿಳಿನಿಂದ ಕನ್ನಡ ಹುಟ್ಟಿದೆ’ ಅಂತ ಹೇಳೋ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ತಮ್ಮ ಸಿನಿಮಾ ಥಗ್ ಲೈಪ್ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕೋಟ್ಯಾಂತರ ಕರುನಾಡಿಗರ ಜೀವನಾಡಿಯಾಗಿರುವ ನಮ್ಮ ಕನ್ನಡ ಭಾಷೆಗೆ ನಟ ಕಮಲ್ ಹಾಸನ್ ಅವಮಾನಿಸಿದ್ದಾರೆ. ಇನ್ನೂ ಈ ವಿಚಾರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್ ತಂಗಡಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.
ಸಚಿವರ ಪತ್ರದಲ್ಲಿ ಏನಿದೆ?
ತಮಿಳು ಚಿತ್ರರಂಗದ ನಟ ಕಮಲ್ ಹಾಸನ್ ಅವರು ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಕನ್ನಡ ಭಾಷೆಯ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರು ಕನ್ನಡ ಭಾಷೆಯ ಕುರಿತಾಗಿ ಮಾತನಾಡಿರುವುದು ಕನ್ನಡಿಗರಿಗೆ ಹಾಗೂ ನನಗೆ ತೀವ್ರ ನೋವಾಗಿದೆ. ಮತ್ತು ಕನ್ನಡಿಗರ ಭಾವನೆಗಳಿಗೆ ಧಕ್ಕೆಯುಂಟಾಗಿದೆ.
ಕಮಲ್ ಹಾಸನ್ ಅವರು ಓರ್ವ ಹಿರಿಯ ನಟರಾಗಿ ಕನ್ನಡ ಭಾಷೆಯ ಹಲವು ಚಿತ್ರಗಳಲ್ಲಿ ನಟಿಸಿ ಕನ್ನಡ ಭಾಷೆಯ ಬಗೆ, ತಿಳಿದವರಾಗಿದ್ದು, ಈ ರೀತಿ ಮಾತನಾಡಿರುವುದು ಅವರಿಗೆ ಶೋಭೆ ತರುವಂತದ್ದಲ್ಲ. ಕನ್ನಡದ ನೆಲ, ಜಲ ಹಾಗೂ ಭಾಷೆ ವಿಚಾರದಲ್ಲಿ ಯಾರೇ, ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಅವರಿಂದ ಇಂತಹ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ.
ಆದ್ದರಿಂದ ಕಮಲ್ ಹಾಸನ್ ಅವರು ಕೂಡಲೇ ಕನ್ನಡಿಗರ ಕ್ಷಮೆಯಾಚಿಸಬೇಕು. ಕಮಲ್ ಹಾಸನ್ ಅವರು ರಾಜ್ಯದ ಜನರು/ ಕನ್ನಡಿಗರ ಕ್ಷಮೆಯಾಚಿಸದಿದ್ದಲ್ಲಿ ಅವರು ನಟಿಸಿರುವ ಚಲನ ಚಿತ್ರಗಳಿಗೆ ಕರ್ನಾಟಕದಲ್ಲಿ ಕೂಡಲೇ ನಿರ್ಬಂಧ ವಿಧಿಸಬೇಕೆಂದು ಈ ಮೂಲಕ ತಿಳಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.