ವಿಜಯಸಾಕ್ಷಿ ಸುದ್ದಿ, ನವದೆಹಲಿ
ಪಿಎಂ ಕೇರ್ಸ್ ಗೆ ರೂ. ಲಕ್ಷಾಂತರ ದೇಣಿಗೆ ನೀಡಿದ್ದ ಉದಾರ ವ್ಯಕ್ತಿಯ ತಾಯಿಗೆ ಬೆಡ್ ಸಿಗದೆ ಸಾವನ್ನಪ್ಪಿದ ಮನ ಕಲಕುವ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.
ಅಹ್ಮದಾಬಾದ್ ನ ವಿಜಯ್ ಪರಿಕ್ ಎಂಬುವವರು ಪಿಎಂ ಕೇರ್ಸ್ ಗೆ ರೂ. 2.51 ಲಕ್ಷ ದೇಣಿಗೆ ನೀಡಿದ್ದರು. ಆದರೂ, ಸಾಯುತ್ತಿರುವ ನನ್ನ ತಾಯಿಗೆ ಆಕ್ಸಿಜನ್ ಬೆಡ್ ದೊರಕಲಿಲ್ಲ. ಮುಂದೆ ಬರುತ್ತಿರುವ 3ನೇ ಕೊರೊನಾ ಅಲೆಯಲ್ಲಿ ಬೆಡ್ ಕಾಯ್ದಿರಿಸಲು ನಾನು ಇನ್ನೆಷ್ಟು ಹಣ ದೇಣಿಗೆ ನೀಡಬೇಕು ಎಂಬುವುದನ್ನು ದಯವಿಟ್ಟು ತಿಳಿಸಿ ಎಂದು ಆ ವ್ಯಕ್ತಿ ನೊಂದು ಕಣ್ಣೀರು ಸುರಿಸಿದ್ದಾರೆ.
ಪಿಎಂ ಕೇರ್ಸ್ ಗೆ ರೂ. 2.51 ಲಕ್ಷ ದೇಣಿಗೆ ನೀಡಿದ್ದೇನೆ. ಆದರೂ ನನ್ನ ತಾಯಿಗೆ ಆಕ್ಸಿಜನ್ ಬೆಡ್ ಸಿಗಲಿಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತದೆ. ಅದಕ್ಕೆ ಎಷ್ಟು ದೇಣಿಗೆ ನೀಡಬೇಕು ಹೇಳಿ, ನೀಡುತ್ತೇನೆ. ಸೋಂಕಿನಿಂದ ನಾನು ಮತ್ತಷ್ಟು ಕುಟುಂಬ ಸದಸ್ಯರನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಸದ್ಯ ಈ ವ್ಯಕ್ತಿಯ ತಾಯಿಗೆ ಬೆಡ್ ಸಿಗದ ಕಾರಣ ಸಾವನ್ನಪ್ಪಿದ್ದಾರೆ. ಈ ಕುರಿತು ಸ್ವತಃ ಆ ವ್ಯಕ್ತಿಯೇ ಟ್ವೀಟ್ ಮಾಡಿ ತಿಳಿಸಿದ್ದಾರೆ. ಸದ್ಯ ಈ ಟ್ವೀಟ್ ಭಾರಿ ವೈರಲ್ ಆಗುತ್ತಿದೆ. ಟ್ವೀಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜನಾಥ್ ಸಿಂಗ್, ಸ್ಮೃತಿ ಇರಾನಿ, ರಾಷ್ಟ್ರಪತಿ ಭವನವನ್ನು ಟ್ಯಾಗ್ ಮಾಡಿದ್ದಾರೆ. ಮೋದಿ ಸರ್ಕಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.