ಬಸ್ ನಿಲ್ದಾಣದ ಅವ್ಯವಸ್ಥೆ ಪರಿಶೀಲಿಸಿದ ಡಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಬಸ್ ನಿಲ್ದಾಣದ ಅವ್ಯವಸ್ಥೆಯನ್ನು ಕಣ್ಣಾರೆ ಕಂಡು ಕೆಎಸ್‌ಆರ್‌ಟಿಸಿ ಡಿಸಿ ದೇವರಾಜು ಬೇಸರ ವ್ಯಕ್ತಪಡಿಸಿದರು. ಎಲ್ಲಿ ಬೇಕೆಂದರಲ್ಲಿ ಬಿದ್ದ ಕಸ, ಕಂಬಗಳಿಗೆಲ್ಲ ಎಲೆಯಡಿಕೆ ಉಗುಳಿದ ಕಲೆಗಳು, ಬೇಕಾಬಿಟ್ಟಯಾಗಿ ನಿಲ್ಲುವ ಬಸ್‌ಗಳು, ಬಸ್ ಹಿಡಿಯಲು ಮಕ್ಕಳನ್ನು ಎತ್ತಿಕೊಂಡು ಓಡುವ ತಾಯಂದಿರು, ಪ್ಲಾಟ್‌ಫಾರ್ಮ್ನಲ್ಲಿದ್ದ ಕಸದ ಡಬ್ಬಿ, ಕುಡಿಯುವ ನೀರಿನ ಕೊರತೆ, ಖಾಸಗಿ ವಾಹನಗಳ ನಿಲುಗಡೆ, ಮುರಿದು ಬಿದ್ದ ಛಾವಣಿ ಇತ್ಯಾದಿಗಳನ್ನು ಕಂಡು ಡಿಸಿ ರೋಸಿಹೋದರು.

Advertisement

ಹೊರಗಿನಿಂದ ಬರುವ ಬಸ್‌ಗಳನ್ನು ಸರಿಯಾಗಿ ಪ್ಲಾಟ್‌ಫಾರ್ಮ್ ಮೇಲೆ ನಿಲ್ಲಿಸಲು ಸಾರಿಗೆ ನಿಯಂತ್ರಕರಿಗೆ ಹೇಳಿದರು. ಸ್ವತಃ ತಾವೇ ನಿಂತು ಐದಾರು ಬಸ್‌ಗಳು ಹಾಗೆಯೇ ನಿಲ್ಲುವಂತೆ ಮಾಡಿದರು. ಕಸದ ಡಬ್ಬಿಯನ್ನು ತೆಗೆಯಿಸಿದರು, ಕುಳಿತವರಿಗೆ ಇಲ್ಲಿ ಉಗುಳಿ ನಿಮ್ಮದೇ ಬಸ್ ನಿಲ್ದಾಣವನ್ನು ಹೊಲಸು ಮಾಡಬೇಡಿರೆಂದು ವಿನಂತಿಸಿದರು.

ದೂರವಾಣಿ ಮೂಲಕ ರೋಣ ಘಟಕಾಧಿಕಾರಿಯನ್ನು ಸಂಪರ್ಕಿಸಿದ ಡಿಸಿ, ಕನಿಷ್ಠ ವಾರಕ್ಕೊಮ್ಮೆಯಾದರೂ ನೀವು ಬಂದು ಇಲ್ಲಿನ ವ್ಯವಸ್ಥೆಯನ್ನು ನೋಡಿಕೊಳ್ಳಬೇಕೆಂದು ತರಾಟೆಗೆ ತೆಗೆದುಕೊಂಡರು. ಇಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಸ್ಥಾನಿಕ ವರದಿಯನ್ನು ನೀಡಬೇಕೆಂದರು. ನರೇಗಲ್ಲ ಬಸ್ ನಿಲ್ದಾಣದ ಅವ್ಯವಸ್ಥೆಯನ್ನು ಕಣ್ಣಾರೆ ಕಾಣುತ್ತಿದ್ದೇನೆ. ಇನ್ನು 3-4 ದಿನದೊಳಗೆ ಎಲ್ಲವೂ ಸರಿಯಾಗಬೇಕೆಂದು ರೋಣ ಘಟಕಾಧಿಕಾರಿಗೆ ತಾಕೀತು ಮಾಡಿದರು.

ದೊಡ್ಡ ನಿಲ್ದಾಣದಲ್ಲಿ ಒಬ್ಬನೇ ಒಬ್ಬ ಸಾರಿಗೆ ನಿಯಂತ್ರಕ ಇರುವುದನ್ನು ಕಂಡು ಕೋಪಗೊಂಡರು. ಇನ್ನೊಬ್ಬ ಸಾರಿಗೆ ನಿಯಂತ್ರಣಾಧಿಕಾರಿಯನ್ನು ನೀಡಲು ಘಟಕಾಧಿಕಾರಿಗೆ ಹೇಳಿದರು. ಸ್ಥಳದಲ್ಲಿದ್ದ ಸಾರಿಗೆ ನಿಯಂತ್ರಕನಿಗೆ ಎಚ್ಚರಿಕೆ ನೀಡಿ ಸುತ್ತಲೂ ಇರುವ ಹೊಲಸನ್ನು ಸ್ವಚ್ಛಗೊಳಿಸುವ ವ್ಯವಸ್ಥೆ ಮಾಡಲು ತಿಳಿಸಿದರು.


Spread the love

LEAVE A REPLY

Please enter your comment!
Please enter your name here