ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಕ್ವಾಲಿಫೈಯರ್ 1ರ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 8 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿದೆ.
ಈ ಮೂಲಕ ಬರೋಬ್ಬರಿ 9 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ ಪ್ರವೇಶಿಸಿದ್ದು, ತಂಡದ ಅಭಿಮಾನಿಗಳಲ್ಲಿ ಸಂತಸ ಮೂಡಿದೆ. ಇನ್ನೂ ಮತ್ತೊಂದೆಡೆ RCB ವಿರುದ್ಧ ಸೋತಿರುವ ಪಂಜಾಬ್ ಗೆ ಜೂನ್ 1 ರಂದು ನಡೆಯಲಿರುವ ಕ್ವಾಲಿಫೈಯರ್ 2 ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಎಲಿಮಿನೇಟರ್ ಪಂದ್ಯದ ವಿಜೇತರೊಂದಿಗೆ ಆಡುವ ಮೂಲಕ ಪಂಜಾಬ್ ಕಿಂಗ್ಸ್ ಫೈನಲ್‌ಗೆ ಪ್ರವೇಶಿಸಲು ಮತ್ತೊಂದು ಅವಕಾಶವನ್ನು ಪಡೆಯುತ್ತದೆ.
ಟಾಸ್ ಗೆದ್ದ ಆರ್ ಸಿಬಿ ನಾಯಕ ರಜತ್ ಪಾಟಿದಾರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್‌ಗೆ ಇಳಿದ ಪಂಜಾಬ್ ಆರ್ ಸಿಬಿ ಮಾರಕ ಬೌಲಿಂಗ್ ದಾಳಿ ಎದುರು ಕಂಗಾಲಾಯಿತು. ಯಶ್ ದಯಾಳ್ ಪ್ರಿಯಾಂಶ್ ಆರ್ಯ ವಿಕೆಟ್ ಪಡೆಯುವ ಮೂಲಕ ಪಂಜಾಬ್ ಕಿಂಗ್ಸ್ ಪತನಕ್ಕೆ ಮುನ್ನುಡಿ ಬರೆದರು.
ಗಾಯದಿಂದ ಚೇತರಿಸಿಕೊಂಡ ಬಳಿಕ ವಾಪಸಾತಿ ಮಾಡಿದ ಜೋಶ್ ಹೇಜಲ್‌ವುಡ್ ಅವರು ಶ್ರೇಯಸ್ ಅಯ್ಯರ್ ಮತ್ತು ಜೋಶ್ ಇಂಗ್ಲಿಸ್ ವಿಕೆಟ್ ಪಡೆಯುವ ಮೂಲಕ ಪಂಜಾಬ್‌ಗೆ ದೊಡ್ಡ ಆಘಾತ ನೀಡಿದರು. ಹೇಜಲ್‌ವುಡ್ ಮೂರು ವಿಕೆಟ್ ಪಡೆದುಕೊಂಡರು. ಭುವನೇಶ್ವರ್ ಕುಮಾರ್ ಪ್ರಭ್‌ಸಿಮ್ರನ್ ಅವರ ವಿಕೆಟ್ ಪಡೆದರು.
ಕಳೆದ ಕೆಲವು ಪಂದ್ಯಗಳಲ್ಲಿ ದುಬಾರಿಯಾಗಿದ್ದು ಸುಯಾಶ್ ಶರ್ಮಾ ಒಂದೇ ಓವರ್ ನಲ್ಲಿ 2 ವಿಕೆಟ್ ಪಡೆದು ಅಬ್ಬರಿಸಿದರು. ಬಳಿಕ ಅಪಾಯಕಾರಿ ಬ್ಯಾಟರ್ ಮಾರ್ಕಸ್ ಸ್ಟೊಯಿನಿಸ್ ಅವರ ವಿಕೆಟ್ ಪಡೆಯುವ ಮೂಲಕ ಮೂರು ವಿಕೆಟ್ ಉರುಳಿಸಿದರು. ರೊಮಾರಿಯೋ ಶೆಫರ್ಡ್ 1 ವಿಕೆಟ್ ಪಡೆದರು. ಯಶ್ ದಯಾಳ್ 2 ವಿಕೆಟ್ ಪಡೆದುಕೊಂಡರು. ಆರ್ ಸಿಬಿ ಮಾರಕ ಬೌಲಿಂಗ್ ದಾಳಿಗೆ ಸಿಲುಕಿದ ಪಂಜಾಬ್ ಕಿಂಗ್ಸ್ ಕೇವಲ 14.1 ಓವರ್ ಗಳಲ್ಲಿ 101 ರನ್‌ಗಳಿಗೆ ಆಲೌಟ್ ಆಯಿತು.
102 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಆರ್ ಸಿಬಿ ಉತ್ತಮ ಆರಂಭ ಪಡೆಯಿತು. ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಮೊದಲ ವಿಕೆಟ್‌ಗೆ 30 ರನ್ ಕಲೆಹಾಕಿದರು. ಕೊಹ್ಲಿ 12 ರನ್ ಗಳಿಸಿದ್ದಾಗ ಔಟಾದರು. ಆದರೆ ಫಿಲ್ ಸಾಲ್ಟ್ ಸ್ಪೋಟಕ ಬ್ಯಾಟಿಂಗ್ ಮುಂದುವರೆಸಿದರು. ಮಯಾಂಕ್ ಅಗರ್ವಾಲ್ 13 ಎಸೆತಗಳಲ್ಲಿ 19 ರನ್ ಗಳಿಸಿದರೆ, ಫಿಲ್ ಸಾಲ್ಟ್ ಮತ್ತೊಂದು ಕಡೆ ಅಬ್ಬರಿಸಿದರು. ಸಾಲ್ಟ್ 27 ಎಸೆತಗಳಲ್ಲಿ 6 ಬೌಂಡರಿ 3 ಭರ್ಜರಿ ಸಿಕ್ಸರ್ ಸಹಿತ ಅಜೇಯ 56 ರನ್ ಗಳಿಸಿದರು. ನಾಯಕ ರಜತ್ ಪಟಿದಾರ್ 8 ಎಸೆತಗಳಲ್ಲಿ ಅಜೇಯ 15 ರನ್ ಗಳಿಸಿ ಸಿಕ್ಸರ್ ಸಿಡಿಸುವ ಮೂಲಕ ಆರ್ ಸಿಬಿಗೆ ಗೆಲುವು ತಂದುಕೊಟ್ಟರು.