ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಕಳಸಾಪೂರ-ಗದಗ ಭಾಗದಲ್ಲಿನ ಭಕ್ತವರ್ಗದ ಬಹುದಿನಗಳ ಆಶಯದಂತೆ ರಾಯರ ಮೃತ್ತಿಕಾ ಬೃಂದಾವನ ಮಠವನ್ನು ಸ್ಥಾಪನೆ ಮಾಡಿದ್ದು, ಈ ಸುಕ್ಷೇತ್ರ ನಿರ್ಮಾಣವಾದ ನಂತರ ಈ ಭಾಗದಲ್ಲಿ ಶಾಂತಿ-ಸಮೃದ್ಧಿ ನೆಲೆಸಲಿದೆ ಎಂದು ಮಂತ್ರಾಲಯದ ಶ್ರೀಮನ್‌ಮಧ್ವಾಚಾರ್ಯ ಮೂಲಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ನುಡಿದರು.
ಅವರು ಶುಕ್ರವಾರ ಇಲ್ಲಿನ ಕಳಸಾಪೂರ ರಸ್ತೆಯಲ್ಲಿರುವ ನಂಜನಗೂಡು ರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳ ಮೃತ್ತಿಕಾ ಬೃಂದಾವನ ಪ್ರತಿಷ್ಠಾಪನಾ ಸ್ವಾಗತ ಸಮಾರಂಭದ ದಿವ್ಯ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಜಾತಿ-ವರ್ಗ-ಪಂಥದ ಎಲ್ಲೆಗಳನ್ನು ದಾಟಿ ಸರ್ವರಿಂದ ಪೂಜಿತಗೊಳ್ಳುವ, ಸರ್ವರನ್ನೂ ಸಲಹುವ ರಾಘವೇಂದ್ರ ಮಹಾಸ್ವಾಮಿಗಳ ಪಾದಧೂಳಿಯಿಂದ ಗದಗ ಕ್ಷೇತ್ರ ಪಾವನವಾಗಿದೆ. ರಾಘವೇಂದ್ರ ಸ್ವಾಮಿಗಳ ಪವಾಡಗಳು ಹಾಗೂ ಅವರ ಶ್ರೀರಕ್ಷೆ ಇಲ್ಲಿನ ಜನರ ಅನುಭವಕ್ಕೆ ವೇದ್ಯವಾಗಿದ್ದು, ಈ ಕಾರ್ಯಕ್ರಮವನ್ನು ಭಕ್ತರು ಹಬ್ಬದಂತೆ ಆಚರಿಸುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಗೆ ತುಲಾಭಾರ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಶ್ರೀಮಠದ ಪಂಡಿತರಿಂದ ವೇದಘೋಷ ಜರುಗಿತು. ಶ್ರೀದೇವಿ ಹೆಗಡಿಕಟ್ಟಿ ಹಾಗೂ ಸಂಗಡಿಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಕಾರ್ಯಕ್ರಮಕ್ಕೂ ಮುನ್ನ ಕಳಸಾಪೂರ ಗ್ರಾಮದಿಂದ ಶ್ರೀಮಠಕ್ಕೆ ವಾದ್ಯವೈಭವದೊಂದಿಗೆ, ಕಲಾ ತಂಡಗಳು ಹಾಗೂ ಭಜನಾ ಮಂಡಳಿಗಳ ಉಪಸ್ಥಿತಿಯಲ್ಲಿ ಜರುಗಿದ ಶೋಭಾಯಾತ್ರೆ ಮೂಲಕ ಪೂಜ್ಯರು ಆಗಮಿಸಿದರು. ರಾಜೇಶ್ವರಿ ಕಲಾಕುಟಿರದ ಮಕ್ಕಳಿಂದ ಸಂಗೀತ-ನೃತ್ಯ ಜರುಗಿತು.
ಕಟ್ಟಡ ನಿಮಾರ್ಣ ಸಮಿತಿ ಕಾರ್ಯದರ್ಶಿ ಗುರುರಾಜ ಹೆಬಸೂರ ಸ್ವಾಗತಿಸಿದರು. ವಾದಿರಾಜ ಆಚಾರ್ಯ, ಗೋಪಾಲ ಅಗರವಾಲ, ಶರತ್ ಹುಯಿಲಗೋಳ, ಕೋದಂಡರಾಮ ಕುಷ್ಟಗಿ, ರಾಘವೇಂದ್ರ ಕಾಲವಾಡ, ಶರಣಬಸಪ್ಪ ಗುಡಿಮನಿ, ಆನಂದ್ ಪೋತ್ನಿಸ್, ಪ್ರವೀಣ ವಾರಕರ, ಮಧುಸೂದನ ಪುಣೇಕರ, ಪ್ರಕಾಶ ಬೊಮ್ಮನಹಳ್ಳಿ ಸೇರಿದಂತೆ ಕಾರ್ಯಕ್ರಮದ ವಿವಿಧ ಸಮಿತಿಗಳ ಮುಖಂಡರು ಹಾಗೂ ಗುರುರಾಯರ ಭಕ್ತರು ಹಾಜರಿದ್ದರು.
ಶೋಭಾಯಾತ್ರೆಯುದ್ದಕ್ಕೂ ಜನರ ಮನೆಗಳು ತಳಿರುತೋರಣಗಳಿಂದ ಸಿಂಗಾರಗೊಂಡಿದ್ದನ್ನು ಕಂಡಿದ್ದು, ಮೃತ್ತಿಕಾ ಬೃಂದಾವನ ಪ್ರತಿಷ್ಠಾಪನೆ ಗದಗ ಭಕ್ತರಿಗೆ ಅತ್ಯಂತ ಖುಷಿ ನೀಡಿದೆ. ಜನರ ಸಹಾಯ-ಸಹಕಾರ ಹಾಗೂ ಭಕ್ತಿಯ ಕಾರಣವಾಗಿ ಇಂಥ ಕಾರ್ಯಕ್ರಮ ಸಂಘಟನೆಯಾಗಿದ್ದು, ಈ ಭಾಗದಲ್ಲಿ ಮಳೆ-ಬೆಳೆ, ದವಸ-ಧಾನ್ಯ ಸೇರಿದಂತೆ ಸಕಲ ಸಮೃದ್ಧಿ ನೆಲೆಸಲಿ, ಗುರುರಾಯರ ಕೃಪೆಯಿಂದ ಈ ಜನರ ಬದುಕು ಹಸನಾಗಲಿ ಎಂದು ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಆಶೀರ್ವದಿಸಿದರು.