ಐಪಿಎಲ್ 2025 ಮುಕ್ತಾಯದ ಹಂತಕ್ಕೆ ಬಂದಿದ್ದು, ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಫೈನಲ್ ಫೈಟ್ ನಡೆಯಲಿದೆ. ಗೆದ್ದ ತಂಡ ಚೊಚ್ಚಲ ಟ್ರೋಫಿ ಎತ್ತಲಿದ್ದಾರೆ.
ಇಂದು ಪಂಜಾಬ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫೈನಲ್‌ಪಂದ್ಯಕ್ಕೆ ಅಹಮದಾಬಾದ್ ನ
ನರೇಂದ್ರ ಮೋದಿ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಎರಡು ದಶಕಗಳಿಂದ ಚೊಚ್ಚಲ ಐಪಿಎಲ್ ಟ್ರೋಫಿಗಾಗಿ ಕಾದಿರುವ ಬೆಂಗಳೂರು ಮತ್ತು ಪಂಜಾಬ್‌ಗೆ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಇಬ್ಬರೂ ಪ್ರಶಸ್ತಿ ಗೆದ್ದುಕೊಡುವ ಉತ್ಸಾಹದಲ್ಲಿ ಎದುರಾಗುತ್ತಿದ್ದಾರೆ.
ಪ್ರತಿ ವರ್ಷವೂ ʻಈ ಸಲ ಕಪ್ ನಮ್ದೇ’ ಎನ್ನುವ ಘೋಷವಾಕ್ಯ ಈ ಬಾರಿಯಾದ್ರೂ ನಿಜವಾಗಲಿ ಅನ್ನೋದು ಅಭಿಮಾನಿಗಳ ಹೆಬ್ಬಯಕೆಯಾಗಿದೆ. ಅದಕ್ಕಾಗಿ ದೇಶಾದ್ಯಂತ ಇರುವ ಕೋಟ್ಯಂತರ ಅಭಿಮಾನಿಗಳು ಈ ಬಾರಿ ಆರ್‌ಸಿಬಿ ಪ್ರಶಸ್ತಿ ಗೆಲ್ಲಲೆಂದು ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಎರಡೂ ತಂಡಗಳು ಇದುವರೆಗೂ ಟ್ರೋಫಿ ಗೆಲ್ಲದೇ ಇರುವುದರಿಂದ 18ನೇ ಆವೃತ್ತಿಯ ಐಪಿಎಲ್ ಫೈನಲ್ ಮೇಲೆ ಕ್ರೀಡಾಭಿಮಾನಿಗಳ ಚಿತ್ತ ನೆಟ್ಟಿದೆ.
ಪಂದ್ಯಕ್ಕೆ ಮಳೆ ಅಡ್ಡಿ!?
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 2ನೇ ಕ್ವಾಲಿಫೈಯರ್ ಪಂದ್ಯ, ಮಳೆಯಿಂದಾಗಿ 2 ಗಂಟೆ ತಡವಾಗಿ ಆರಂಭಗೊಂಡಿತ್ತು. ಫೈನಲ್‌ಗೂ ಸಾಕ್ಷಿಯಾಗಲಿರುವ ಅಹಮದಾಬಾದ್‌ನಲ್ಲಿ ಸದ್ಯದ ಮಾಹಿತಿ ಪ್ರಕಾರ ಮಂಗಳವಾರ ಮಳೆಯ ಸಾಧ್ಯತೆ ಶೇ.62ರಷ್ಟಿದೆ. ಆದರೆ, ಬೆಳಗ್ಗೆ ಅಥವಾ ಮಧ್ಯಾಹ್ನ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ರಾತ್ರಿ ವೇಳೆ ಮಳೆಯ ಸಾಧ್ಯತೆ ಶೇ.5ರಷ್ಟು ಎಂದು ಹವಾಮಾನ ವರದಿ ತಿಳಿಸಿದೆ.