ಬೆಂಗಳೂರು: – ಇಂದು ಗುಜರಾತ್ನ ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ IPL 2025ರ ಅಂತಿಮ ಫೈಟ್ ನಡೆಯಲಿದೆ. RCB ಗೆಲುವಿಗಾಗಿ ದೇಶದ ಮೂಲೆ-ಮೂಲೆಗಳಲ್ಲೂ ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ಈ ಹೊತ್ತಲ್ಲೇ RCB ಅಭಿಮಾನಿಗಳಿಗೆ ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಖಡಕ್ ಸೂಚನೆ ಕೊಟ್ಟಿದ್ದಾರೆ.
ಅಭಿಮಾನದ ಹೆಸರಿನಲ್ಲಿ ಅತಿರೇಕದ ವರ್ತನೆ ತೋರುವಂತಿಲ್ಲ ಎಂದು ಅಭಿಮಾನಿಗಳಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ರಸ್ತೆ ತಡೆಯುವುದು, ಟೈರ್ಗೆ ಬೆಂಕಿ ಹಚ್ಚುವುದು, ವಾಹನ ತಡೆಯುವುದು ಸಾರ್ವಜನಿಕರಿಗೆ ತೊಂದರೆ, ಶಾಂತಿಭಂಗ ಉಂಟು ಮಾಡುವಂತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ನಿಗಾ ವಹಿಸಲು ಡಿಸಿಪಿ, ಎಸಿಪಿಗಳಿಗೆ ಕಮಿಷನರ್ ಸೂಚನೆ ನೀಡಿದ್ದಾರೆ. ಆಯಾ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ವಹಿಸಬೇಕೆಂದು ಹೇಳಲಾಗಿದೆ. ಎಂ.ಜಿ.ರಸ್ತೆ, ಕೋರಮಂಗಲ, ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ನಿಗಾ ಹೆಚ್ಚಿಸಲಾಗುತ್ತದೆ.
ಬೆಂಗಳೂರಿನಲ್ಲಿ ಸ್ಕ್ರೀನ್ ಅಳವಡಿಸಿರುವ ಕಡೆ ಪೊಲೀಸರ ಕಣ್ಗಾವಲು ಇರಲಿದೆ. ಪೊಲೀಸರ ಅನುಮತಿ ಪಡೆಯದೆ ಸ್ಕ್ರೀನ್ ಅಳವಡಿಕೆ ಮಾಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಪಬ್, ಕ್ಲಬ್, ರೆಸ್ಟೋರೆಂಟ್ಗಳು ಅವಧಿ ಮೀರಿ ಕಾರ್ಯಾಚರಣೆ ಮಾಡುವಂತಿಲ್ಲ. ರೆಸ್ಟೋರೆಂಟ್ಗಳನ್ನು ನಿಗದಿತ ಸಮಯಕ್ಕೆ ಬಂದ್ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಆರ್ಸಿಬಿ ಗೆದ್ದರೆ ಸಂಭ್ರಮಾಚರಣೆ ವೇಳೆ ಯಾವುದೇ ಅವಘಡಗಳು ಸಂಭವಿಸದಂತೆ ಅಗತ್ಯ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ.