ನಟ ಕಮಲ್ ಹಾಸನ್ ಕನ್ನಡದ ಬಗ್ಗೆ ಹೇಳಿರುವ ಹೇಳಿಕೆ ‘ಥಗ್ ಲೈಫ್’ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗಲು ಅಡಚಣೆ ಉಂಟಾಗಿದೆ. ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂದು ಕಮಲ್ ನೀಡಿರುವ ಹೇಳಿಕೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ತಮ್ಮ ಹೇಳಿಕೆಯ ಬಗ್ಗೆ ಕಮಲ್ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ಮಧ್ಯೆ ಥಗ್ ಲೈಫ್ ಬಿಡುಗಡೆಗೆ ಭದ್ರತೆ ಕೋರಿ ಕಮಲ್ ಹಾಸನ್ ಅವರು ಕರ್ನಾಟಕ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು. ಆದ್ರೆ ಕೋರ್ಟ್ ಕಮಲ್ ಅವರನ್ನು ತರಾಟೆಗೆ ತೆಗೆದುಕೊಂಡು ಕ್ಷಮೆ ಕೇಳುವಂತೆ ಹೇಳಿದೆ.
ಕಮಲ್ ಹಾಸನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು (ಜೂನ್ 3) ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ನಡೆದಿದೆ. ಈ ವೇಳೆ ಕಮಲ್ ಹಾಸನ್ ರನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು ನಿಮ್ಮ ತಪ್ಪಿಗೆ ಪೊಲೀಸರು ಭದ್ರತೆ ನೀಡಬೇಕೇ? ಎಂದು ಪ್ರಶ್ನೆ ಮಾಡಿದೆ. ಅಲ್ಲದೆ ಮಧ್ಯಾಹ್ಹ 2.30ರವರೆಗೆ ಕಮಲ್ ಹಾಸನ್ ವಕೀಲರಿಗೆ ಗಡುವು ನೀಡಿದ್ದು, ನಿಲುವು ತಿಳಿಸುವಂತೆ ಕೋರ್ಟ್ ಸೂಚಿಸಿದೆ.
ಎರಡು ದಿನದಲ್ಲಿ ಚಲನಚಿತ್ರ ಬಿಡುಗಡೆ ಆಗಲಿದ್ದು, ಈ ಸಂದರ್ಭದಲ್ಲಿ ವಿವಾದ ಶುರುವಾಗಿದೆ. ಆಡಿಯೋ ಬಿಡುಗಡೆಯ ಸಂದರ್ಭದಲ್ಲಿ ವಿವಾದ ಆರಂಭವಾಗಿದೆ ಎಂದು ಕೋರ್ಟ್ ಗಮನಕ್ಕೆ ತಂದರು. ಈ ವೇಳೆ ನ್ಯಾಯಮೂರ್ತಿಗಳು, ನೆಲ, ಭಾಷೆಯ ಜೊತೆ ಜನರ ಭಾವನೆ ಇರುತ್ತದೆ. ಜನರ ಭಾವನೆಗೆ ಯಾರೂ ಧಕ್ಕೆ ತರಬಾರದು. ಜನರು ಕ್ಷಮೆ ಕೇಳುವಂತೆ ಒತ್ತಾಯಿಸುತ್ತಿದ್ದಾರೆ. ಕಮಲ್ ಹಾಸನ್ ಕ್ಷಮೆ ಕೇಳಿದ್ದಾರಾ ಎಂದು ಪ್ರಶ್ನಿಸಿದರು.
ಭಾಷೆ ಹುಟ್ಟಿದರ ಬಗ್ಗೆ ನೀವು ಮಾತನಾಡುವುದಕ್ಕೆ ನೀವು ಭಾಷಾ ತಜ್ಞರೇ ಅಥವಾ ಇತಿಹಾಸಕಾರರೇ? ಒಂದೇ ಒಂದು ಕ್ಷಮೆ ಕೇಳೋದಕ್ಕೆ ಯಾಕೆ ಇಷ್ಟೊಂದು ಹಾವ ಭಾವ? ಈ ಹಿಂದೆ ರಾಜಗೋಪಾಲಾಚಾರಿ ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಕ್ಷಮೆಯಾಚನೆ ಮಾಡಿದ್ದು ನಿಮಗೆ ಗೊತ್ತಿಲ್ವೆ ಎಂದರು.
350 ಕೋಟಿ ರೂ. ಸಿನಿಮಾಗೆ ಹಾಕಿದ್ದೀರಿ ಎನ್ನುತ್ತೀರಿ. ಭಾವನೆಗೆ ಧಕ್ಕೆ ಮಾಡಿ ಇಲ್ಲಿ ಸಂಪಾದನೆ ಮಾಡಬೇಕಾ? ಎಲ್ಲವೂ ಸರಾಗವಾಗಿ ಆಗಬೇಕು ಅಂದರೆ ಕ್ಷಮೆಯನ್ನು ಕೋರಿ. ಅಭಿವ್ಯಕ್ತಿ ಸ್ವಾತಂತ್ರ‍್ಯದಿಂದ ಭಾವನೆ ಧಕ್ಕೆ ಆಗಬಾರದು. ಕೋಟ್ಯಂತರ ರೂ. ಹಾಕಿದ್ದೀರಿ. ಕರ್ನಾಟಕದಲ್ಲಿ ಯಾಕೆ ಸಿನಿಮಾ ರಿಲೀಸ್ ಮಾಡುತ್ತೀರಿ? ಕರ್ನಾಟಕವನ್ನು ಬಿಟ್ಟು ಬಿಡಿ ಎಂದರು.
ಈ ಸಂದರ್ಭದಲ್ಲಿ ಸಿನಿಮಾ ನೋಡುವುದು ಎಲ್ಲರ ಮೂಲಭೂತ ಹಕ್ಕು. ಹೀಗಾಗಿ ಭದ್ರತೆಗೆ ನೀಡಲು ಮನವಿ ಮಾಡುತ್ತಿದ್ದೇವೆ. ಏನೋ ಹೇಳಲು ಹೋಗಿ ಏನೋ ಆಗಿದೆ ಎಂದು ಕಮಲ್ ಪರ ವಕೀಲರು ಮನವಿ ಮಾಡಿಕೊಂಡರು.
ಇದಕ್ಕೆ ನಾಲಿಗೆ ತಪ್ಪಾಗಿ ಹೇಳಿದರೆ ಇಷ್ಟು ಹೊತ್ತಿಗೆ ಕ್ಷಮೆ ಕೇಳಬಹುದಿತ್ತು. ಚಿತ್ರ ಮಂದಿರಕ್ಕೆ ಭದ್ರತೆ ಬೇಕಾ? ಬೇಡ್ವಾ ಎಂದು ಆದೇಶ ಮಾಡುವ ಮೊದಲು ಕ್ಷಮೆ ಕೇಳಲಿ. ಒಂದು ವೇಳೆ ಇತಿಹಾಸಕಾರ ದಾಖಲೆ ಸಮೇತ ಹೇಳಿದರೆ ಚರ್ಚೆ ವಿಷಯ ಆಗುತ್ತಿತ್ತು. ಕ್ಷಮೆ ಕೇಳದ ಹೊರತು ಹೇಳಿಕೆ ಹಿಂಪಡೆಯಲು ಸಾಧ್ಯವಿಲ್ಲ ಎಂದು ಜಡ್ಜ್ ಸೂಚಿಸಿದರು.