ಬೆಂಗಳೂರು: ಆರ್ ಸಿಬಿ ವಿಜಯೋತ್ಸವದ ವೇಳೆ ದೊಡ್ಡ ದುರಂತ ನಡೆದಿದೆ. ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದಾರೆ ಮತ್ತು 33 ಜನರು ಗಾಯಗೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ, ಘಟನೆ ಸಂಬಂಧ ಸಿಎಂ, ಡಿಸಿಎಂ ಸೇರಿ ಕೆಎಸ್ಸಿಎ ಅಧಿಕಾರಿಗಳ ವಿರುದ್ಧ ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನಲ್ಲೇನಿದೆ?
ಜನಪ್ರಿಯ ಪ್ರಚಾರದ ರಾಜಕೀಯ ಲಾಭದ ಕಾರಣಕ್ಕಾಗಿ ಆರ್ಸಿಬಿ ತಂಡದ ಆಟಗಾರರನ್ನು ವಿಧಾನಸೌಧದ ಮುಂಭಾಗ ಸನ್ಮಾನ ಮಾಡುವ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಿಸುವ ದುಡುಕಿನ ನಿರ್ಧಾರ ಕೈಗೊಂಡು, ಸೂಕ್ತ ಭದ್ರತೆಯ ನಿರ್ಲಕ್ಷ್ಯವನ್ನು ತೋರಿಸಿ, ಸುಮಾರು 11 ಜನರ ಸಾವು ಸಂಭವಿಸಿದ್ದು, 30 ಜನರಿಗಿಂತಲೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ.
ಈ ದುರಂತಕ್ಕೆ ಕಾರಣರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳು ಹಾಗೂ ಇತರರ ವಿರುದ್ದ ಭಾರತೀಯ ನ್ಯಾಯ ಸಂಹಿತೆಯ ಕಲಂ 106 ರ ಪ್ರಕಾರ ಮೊಕದ್ದಮೆ ದಾಖಲಿಸಿ, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.