ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಗಂಗಾಮತ ಸಮಾಜ ಬಾಂಧವರಿಂದ ಗುರುವಾರ ಗಂಗಾಮಾತಾ ಜಯಂತ್ಯುತ್ಸವವನ್ನು ಶೃದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಬೆಳಿಗ್ಗೆ ಪಟ್ಟಣದ ಪುರಸಭೆ ಹತ್ತಿರದ ಸುಣಗಾರ ಓಣಿಯ ಗಂಗಾದೇವಿ ದೇವಸ್ಥಾನದಲ್ಲಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಬಳಿಕ ಗಂಗಾದೇವಿ ಭಾವಚಿತ್ರದ ಮೆರವಣಿಗೆ ಪೂರ್ಣಕುಂಭ ಮತ್ತು ವಾದ್ಯಗಳ ಸಮೇತ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನೆರವೇರಿತು.
ಮೆರವಣಿಗೆಗೆ ಗಂಗಾದೇವಿಯ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಅಶ್ವಿನಿ ಅಂಕಲಕೋಟಿ, ಭಗೀರಥನ ತಪಸ್ಸಿಗೆ ಮೆಚ್ಚಿದ ಗಂಗಾ ಮಾತೆ ಭೂಲೋಕದ ಸಕಲ ಚರಾಚರಗಳಿಗೂ ಆಶ್ರಯದಾತೆ ಮತ್ತು ಸಕಲ ಜೀವರಾಶಿಗಳಿಗೆ ಉಸಿರಾದ ದಿನವೆಂದು ಗಂಗಾಮಾತಾ ಜಯಂತಿ ಆಚರಿಸಲಾಗುತ್ತದೆ. ಪವಿತ್ರ ಗಂಗಾಮಾತೆ ಜೀವಿಗಳಿಗೆ ಜೀವಜಲ, ಪಾಪ-ಕರ್ಮ, ಕಲ್ಮಷಗಳನ್ನೆಲ್ಲ ತೊಳೆದುಹಾಕಿ ಮೋಕ್ಷ ಕರುಣಿಸುವ ಮಹಾತಾಯಿಯಾಗಿದ್ದಾಳೆ ಎಂದರು.
ಈ ಸಂದರ್ಭದಲ್ಲಿ ಶಿವಯೋಗಿ ಅಂಕಲಕೋಟಿ, ಸಮಾಜದ ಅಧ್ಯಕ್ಷ ಬರಮಪ್ಪ ಕಟ್ಟಿಮನಿ, ಮಹಾದೇವಪ್ಪ ಕಟ್ಟಿಮನಿ, ಸೋಮಪ್ಪ ಸುಣಗಾರ, ಗಂಗಾಧರ ತಂಡಿಗೇರ, ಮಹಾಂತೇಶ ಶಿಗ್ಲಿ, ಬಾಲೇಹೊಸೂರಿನ ಗುಡದಯ್ಯ ಬಾರಕಿ, ಮಹಾಂತೇಶ ಸುಣಗಾರ, ಹನುಮಂತಪ್ಪ ಸುಣಗಾರ, ಮಾಲತೇಶ ತಂಡಿಗೇರ, ಕಿರಣ್ ಕಟ್ಟಿಮನಿ, ಆಕಾಶ ಸವದತ್ತಿ, ಪುಟ್ಟಪ್ಪ ಹೊಸೂರಿ, ಯಲ್ಲಪ್ಪ ಜಾಲಗಾರ ಸೇರಿದಂತೆ ಅನೇಕರಿದ್ದರು.