ಬೆಂಗಳೂರು:- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಪ್ರಕರಣದಲ್ಲಿ ಆರ್‌ಸಿಬಿ, ಡಿಎನ್‌ಎ, ಕೆಎಸ್‌ಸಿಎ ಪ್ರತಿನಿಧಿಗಳನ್ನು ಬಂಧಿಸುವಂತೆ ಸಿಎಂ ಸಿದ್ದರಾಮಯ್ಯ ಗುರುವಾರ ಸೂಚನೆ ನೀಡಿದ್ದರು.
ಸಿಎಂ ಸೂಚನೆ ಬೆನ್ನಲ್ಲೇ ಡಿಎನ್‌ಎ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮೂವರು ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ನ ಓಬ್ಬರು ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಡಿಎನ್‌ಎ ಇವೆಂಟ್ ಮ್ಯಾನೇಜ್ಮೆಂಟ್‌ನ ಸುನೀಲ್ ಮ್ಯಾಥ್ಯೂ, ಕಿರಣ್ ಮತ್ತು ವಿನೋದ್, ಕೆಎಸ್‌ಸಿಎ ಪ್ರತಿನಿಧಿ ಹೆಸರು ಬಹಿರಂಗಪಡಿಸಿಲ್ಲ.
ಇನ್ನೂ ಕೆಎಸ್‌ಸಿಎ ಪ್ರಮುಖರೆಲ್ಲಾ ನಿನ್ನೆ ರಾತ್ರಿಯೇ ಎಸ್ಕೇಪ್ ಆಗಿದ್ದು, ಅವರ ಮನೆಗಳಿಗೂ ತೆರಳಿ ಪೊಲೀಸರು ಹುಡುಕಾಟ ನಡೆಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಘಟನೆ ವಿವರ:
ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತಕ್ಕೆ ಬುಧವಾರ 11 ಅಭಿಮಾನಿಗಳು ದಾರುಣ ಸಾವನ್ನಪ್ಪಿದರು. ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಾಗರೋಪಾದಿಯಲ್ಲಿ ಜನ ನೆರೆದಿದ್ದರು. ಜನರಲ್ಲಿ ನೂಕುನುಗ್ಗಲಿಂದ ಕಾಲ್ತುಳಿತ ಉಂಟಾಗಿ ದುರಂತ ಸಂಭವಿಸಿತು.