ಕೋಲಾರ:– ಕೆಮಿಕಲ್ ಮಿಶ್ರಿತ ಹಾಲು ತಯಾರಿಸುತ್ತಿದ್ದ ಮನೆ ಮೇಲೆ ಪೊಲೀಸರು ಹಾಗೂ ಆಹಾರ ನಿರೀಕ್ಷಕ ಅಧಿಕಾರಿಗಳು ಜಂಟಿ ದಾಳಿ ನಡೆಸಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ಸವಟೂರು ಗ್ರಾಮದಲ್ಲಿ ಜರುಗಿದೆ.
ಗ್ರಾಮದ ನರೇಶ್ ರೆಡ್ಡಿ ಎಂಬುವರಿಗೆ ಸೇರಿದ ಮನೆಯಲ್ಲಿ ಈ ದಾಳಿ ನಡೆದಿದೆ. ನರೇಶ್ ರೆಡ್ಡಿ ಎಂಬಾತ ಆಂದ್ರದ ತಿರುಮಲ ಹಾಲು ಡೈರಿಗೆ, ಹಾಲು ಸರಬರಾಜು ಮಾಡುತ್ತಿದ್ದರು. ಆದರೆ ಈತ ಕೆಮಿಕಲ್ ಮಿಶ್ರಿತ ಹಾಲು ತಯಾರಿಸುತ್ತಿದ್ದ ಬಗ್ಗೆ ದೂರು ದಾಖಲಾಗಿತ್ತು. ದೂರಿನ ಅನ್ವಯ ಖಚಿತ ಮಾಹಿತಿ ಆಧರಿಸಿ ಮುಳಬಾಗಿಲು ಡಿವೈಎಸ್ಪಿ ನಂದಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲಿಸಿದರು.
ಈ ವೇಳೆ ಕೆಮಿಕಲ್ ಹಾಲು ತಯಾರಿಕೆಗೆ ಬಳಸುತ್ತಿದ್ದ ಕೆಮಿಕಲ್ ಪೌಡರ್, ಹಾಲು, ಹಾಗೂ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಹಾಲು ರವಾನೆಗೆ ಬಳಸುತ್ತಿದ್ದ ಮಿನಿ ಕ್ಯಾಂಟರ್, ನಾಲ್ಕು ಕ್ಯಾನ್ ಹಾಲು ವಶಕ್ಕೆ ಪಡೆಯಲಾಗಿದೆ. ಬಳಿಕ ಆಹಾರ ನಿರೀಕ್ಷಕ ಅಧಿಕಾರಿಗಳು ಹಾಲಿನ ಮಾದರಿ ಸಂಗ್ರಹಿಸಿ ಲ್ಯಾಬ್ಗೆ ಕಳಿಸಿದ್ದಾರೆ. ನಂಗಲಿ ಪೊಲೀಸರಿಂದ ಮನೆ ಮಾಲೀಕ ನರೇಶ್ ರೆಡ್ಡಿ ಸೇರಿ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.