ಅಂತರಂಗದ ಅರಿವಿನಿಂದ ಪರಿವರ್ತನೆ ಸಾಧ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಜಾತಿ, ಮತ, ಪಂಥ, ಲಿಂಗಭೇದ ಅಳಿಸಿ ಸಂತೃಪ್ತವಾದ ಸಮಾಜ ಕಟ್ಟಿದವರು ಶರಣರು. ಅದು ಸಾಧ್ಯವಾದದ್ದು ಅಂತರಂಗದ ಅರಿವಿನಿಂದ. ಅಂತರಂಗದ ಅರಿವಿನಿಂದ ಬಹಿರಂಗದ ಪರಿವರ್ತನೆ ಸಾಧ್ಯ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.

Advertisement

ಲಿಂಗಾಯತ ಪ್ರಗತಿಶೀಲ ಸಂಘದ 2748ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಒಬ್ಬ ವ್ಯಕ್ತಿಯ ಜ್ಞಾನ ಸಂವೇದನೆ, ಅರಿವಿನ ಬೆಳವಣಿಗೆಯೇ ಅವನ ಬಾಹ್ಯ ನಡುವಳಿಕೆ. ಅದು ಸಮಾಜದ ಪರಿವರ್ತನೆಯ ಮೇಲೆ ಪ್ರಭಾವ ಬೀರುತ್ತದೆ. ಬ್ರಹ್ಮಚರ್ಯ, ಗೃಹಸ್ಥ ನಂತರ ಸನ್ಯಾಸ ದೀಕ್ಷೆ ಪಡೆಯಬೇಕು. ಆದರೆ ಶಿವಪ್ರಿಯಾನಂದ ಸ್ವಾಮಿಗಳು ನೇರವಾಗಿ ಸನ್ಯಾಸ ದೀಕ್ಷೆ ಪಡೆದಿದ್ದಾರೆ. ಸನ್ಯಾಸಿಗಳು ಲೌಕಿಕ ಗೊಡವೆ ಇರಲಾರದೆ, ಮಾಯಾಮೋಹಗಳಿಗೆ ಬಲಿಯಾಗದೆ ಸಮಾಜ ಸೇವೆ ಮಾಡುತ್ತಾರೆ ಎಂದರು.

ಸನ್ಯಾಸ ದೀಕ್ಷೆ ಪಡೆದು ಪುರಪ್ರವೇಶ ಮಾಡಿದ ಶಿವಪ್ರಿಯಾನಂದ ಸ್ವಾಮಿಗಳವರ ಪರ್ವಪ್ರಸಂಗದ ಪ್ರಯುಕ್ತ ಗೌರವಿಸಿ ಶುಭ ಹಾರೈಸಿದರು.

ಕೆವಿಎಸ್‌ಆರ್ ಕಾಲೇಜಿನ ನಿವೃತ್ತ ಉಪನ್ಯಾಸಕ ಎಸ್.ಎಚ್. ದೇಶಪ್ಪನವರ ಉಪನ್ಯಾಸ ನೀಡಿ, ಮಾನವನ ಅಂತರಂಗದಲ್ಲಿ ಒಮ್ಮೆ ಅರಿವು ಮೂಡಿದರೆ ತಾನು ಯಾರು, ಏಕೆ ಬದುಕಬೇಕು. ಹೇಗೆ ಬದುಕಬೇಕು ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾನೆ. ಇದರಿಂದ ಅವನ ಬಾಹ್ಯ ನಡವಳಿಕೆಗಳು ನಿರ್ಣಯಗಳು ಬದಲಾಗುತ್ತವೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಸಂತ ರಾಜಕಾರಣಿ ಡಿ.ಆರ್. ಪಾಟೀಲ ಹಾಗೂ ಕರ್ನಾಟಕ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಉಪ ಕುಲಸಚಿವ ರಾಮಕೃಷ್ಣ ಕುಲಕರ್ಣಿ ಉಪಸ್ಥಿತರಿದ್ದರು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ವಚನ ಸಂಗೀತವನ್ನು ನಡೆಸಿದರು. ಧಾರ್ಮಿಕ ಗ್ರಂಥ ಪಠಣವನ್ನು ಪ್ರದೀಪ್ ಲಮಾಣಿ ಹಾಗೂ ವಚನ ಚಿಂತನವನ್ನು ದೀಕ್ಷಾ ಲಮಾಣಿ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ರಾಘವೇಂದ್ರ ಎಸ್.ಕಾಲವಾಡ ವಹಿಸಿದ್ದರು.

ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ, ನಾಗರಾಜ್ ಹಿರೇಮಠ, ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹ ಚೇರಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು.

ಶಿವಾನುಭವ ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ತೋಂಟದಾರ್ಯ ಮಠದ ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಪೂಜ್ಯ ಶಿವಪ್ರಿಯಾನಂದ ಸ್ವಾಮಿಗಳು ಮಾತನಾಡಿ, ಪಂಥರಹಿತವಾದ ಪಂಥ ಸೃಷ್ಟಿಸುವುದು ನಮ್ಮ ಆಶಯ. ಮೌಲ್ಯಗಳ ಕುಸಿತ ಮಕ್ಕಳಿಂದ ಆಗಿಲ್ಲ. ದೊಡ್ಡವರಿಂದ ಆಗಿದೆ. ಒಂದು ಮಗು ದೇವರನ್ನು 2 ನಿಮಿಷ ನೋಡುತ್ತದೆ. ತಾಯಿಯನ್ನು 10 ನಿಮಿಷ ನೋಡುತ್ತದೆ. ಶಿಕ್ಷಕರನ್ನು 50 ನಿಮಿಷ ನೋಡುತ್ತದೆ. ಆದರೆ ಸನ್ಯಾಸಿಗಳನ್ನು ಸಮಾಜ ನಿರಂತರ ನೋಡುತ್ತದೆ. ಸಮಾಜ ಆದರ್ಶಗಳನ್ನು ನಿರೀಕ್ಷೆ ಮಾಡುತ್ತದೆ ಎಂದರು.


Spread the love

LEAVE A REPLY

Please enter your comment!
Please enter your name here