ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ
ಅನಗತ್ಯವಾಗಿ ಸಂಚರಿಸುವ ವಾಹನಗಳ ಮೇಲೆ ನಿಗಾವಹಿಸಿ ಮಾರ್ಗಸೂಚಿ ಉಲ್ಲಂಘನೆ ಕಂಡು ಬಂದಲ್ಲಿ ಅಂತಹವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಹೇಳಿದ್ದಾರೆ.
ಅವರು, ಪಟ್ಟಣದ ವಿವಿಧೆಡೆ ಸಂಚರಿಸಿ ಪೊಲೀಸರಿಗೆ ಈ ಖಡಕ್ ಸೂಚನೆ ನೀಡಿದರು. ಸಿಬ್ಬಂದಿಗಳು ಕೂಡ ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸಿ ಎಂದರು.
ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಹಾಗೂ ಸರಕಾರ ವಿಧಿಸಿರುವಂತಹ ಮಾರ್ಗಸೂಚಿಗಳನ್ನು ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು ಸಹ ಪಾಲಿಸಬೇಕು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹಗಲಿರುಳು ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ಮಾಡುತ್ತಿದ್ದಾರೆ. ಇದನ್ನು ಅರಿತುಕೊಂಡು ಜನತೆಯು ಸಹ ಅನಾವಶ್ಯಕವಾಗಿ ಹೊರಗಡೆ ಸಂಚರಿಸದೆ ಮನೆಯಲ್ಲಿಯೇ ಇದ್ದು ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಕೋವಿಡ್ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕೆಂದು ಹೇಳಿದರು.

ಕೋವಿಡ್ -19 ಎರಡನೇ ಅಲೆ ನಿಯಂತ್ರಣಕ್ಕಾಗಿ ಜಿಲ್ಲಾಧಿಕಾರಿಗಳು ಎಲ್ಲ ಚಟುವಟಿಕೆಗಳನ್ನು ನಿರ್ಬಂಧಿಸಿ ಹೊರಡಿಸಿದ ಆದೇಶ ಜೂನ್ 1 ರಂದು ಬೆಳಿಗ್ಗೆ 6:00 ಗಂಟೆಗೆ ಮುಗಿಯಲಿದ್ದು, ನಂತರ ಜೂನ್ 7ರವರೆಗೆ ಬೆಳಿಗ್ಗೆ 6ರಿಂದ 10ರವರೆಗೆ ಅಗತ್ಯವಸ್ತುಗಳನ್ನು ಕೊಂಡುಕೊಳ್ಳುವುದಕ್ಕೆ ಸರಕಾರ ಅವಕಾಶವನ್ನು ಕಲ್ಪಿಸಿದೆ. ಆಗ ಮಾರುಕಟ್ಟೆಗಳಲ್ಲಿ ಹೆಚ್ಚು ಜನಸಂದಣಿ ಯಾಗದಂತೆ ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸುವುದಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳಿ ಎಂದರು.
ಇದೇ ಸಂದರ್ಭದಲ್ಲಿ ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ವೃದ್ಧೆಗೆ ದಿನಸಿ ವಸ್ತು ನೀಡಿದರು.

ವಿಶೇಷವಾಗಿ ದೇವಸ್ಥಾನಗಳಲ್ಲಿ ಉಡಿತುಂಬುವ ಕಾರ್ಯಕ್ರಮಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರಿದಂತೆ ಕ್ರಮವಹಿಸಬೇಕು ಎಂದರು.
ಸಂಕಷ್ಟದಲ್ಲಿರೋರಿಗೆ ನೆರವಾಗಿ
ಕಠಿಣ ಕರ್ಫ್ಯೂ ನಿಂದ ಸಂಕಷ್ಟದಲ್ಲಿರುವಂತಹ ಜನರನ್ನು ಗುರುತಿಸಿ ದಾನಿಗಳಿಂದ ಅಗತ್ಯವಸ್ತುಗಳನ್ನು ಪಡೆದುಕೊಂಡು ಸಂಕಷ್ಟದಲ್ಲಿರುವಂತಹ ಜನತೆಗೆ ನೆರವು ಆಗುವಂತಹ ಕೆಲಸವನ್ನು ಮಾಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ಆರೈಕೆ ಕೇಂದ್ರಕ್ಕೂ ಭೇಟಿ
ಶಿರಹಟ್ಟಿ ಹೊರವಲಯದಲ್ಲಿ ಇರುವ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಆರಂಭಗೊಂಡಿರುವ ಆರೈಕೆ ಕೇಂದ್ರಕ್ಕೂ ಸಹ ಎಸ್ಪಿ ಭೇಟಿ ನೀಡಿ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಶಿರಹಟ್ಟಿ ಸಿಪಿಐ ವಿಕಾಸ್ ಲಮಾಣಿ ಪಿಎಸ್ಐ ನವೀನ್ ಜಕ್ಕಲಿ ಉಪಸ್ಥಿತರಿದ್ದರು.