ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮೊಟೊ ಕೇಸ್ ಸಂಬಂಧ ಇಂದು ಹೈಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದ್ದ ಹೈ ಕೋರ್ಟ್ ಇಂದು ವಿಚಾರಣೆ ಮಾಡಿದೆ. ಸರ್ಕಾರದ ಪ್ರತಿಕ್ರಿಯೆ ಬಂದ ಬಳಿಕ ಮಧ್ಯಂತರ ಅರ್ಜಿ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಯಾವುದೇ ನಿರ್ದೇಶನ ನೀಡದೇ ಅರ್ಜಿಗಳ ವಿಚಾರಣೆಯನ್ನು ಜೂ.12 ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.
ದುರಂತದ ಬಳಿಕ ಯಾವುದೇ ಪ್ರಕರಣಗಳನ್ನು ದಾಖಲಾಗಿರಲಿಲ್ಲ. ಹೈಕೋರ್ಟೇ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿಕೊಂಡಿತ್ತು. ಹಲವರಿಂದ ಹೈಕೋರ್ಟ್ಗೆ ಮಧ್ಯಂತರ ಅರ್ಜಿ ವಿಚಾರಣೆಗೆ ಮನವಿ ಹಿನ್ನೆಲೆ ನ್ಯಾ.ವಿ.ಕಾಮೇಶ್ವರ ರಾವ್ ಮತ್ತು ನ್ಯಾ.ಸಿ.ಎಂ.ಜೋಶಿ ಅವರ ಪೀಠದಿಂದ ಇಂದು ವಿಚಾರಣೆ ಮಾಡಿದ್ದು, ಸರ್ಕಾರದ ಪ್ರತಿಕ್ರಿಯೆ ಬಂದ ಬಳಿಕ ತೀರ್ಮಾನ ನೀಡುವುದಾಗಿ ಹೇಳಿ ಜೂ.12 ಮಧ್ಯಾಹ್ನ 2.30ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.
ಮ್ಯಾಜಿಸ್ಟೀರಿಯಲ್ ತನಿಖೆ, ನ್ಯಾಯಾಂಗ ತನಿಖೆ ವರದಿ ಸಲ್ಲಿಸುತ್ತೇವೆ. ತನಿಖೆಗೆ ಮೊದಲೇ ಸರ್ಕಾರ ತೀರ್ಮಾನಿಸಿದೆ ಎಂದು ವಿವಾದ ಬೇಡ. ಹೀಗಾಗಿ ಒಂದು ತಿಂಗಳು ಕಾಲಾವಕಾಶ ನೀಡುವಂತೆ ಎಜಿ ಶಶಿಕಿರಣ್ ಶೆಟ್ಟಿ ಮನವಿ ಮಾಡಿದರು. ಜೂನ್ 12ರೊಳಗೆ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡುವಂತೆ ಹೈಕೋರ್ಟ್ ಸೂಚಿಸಿದೆ.