ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಬಸ್ ನಿಲ್ದಾಣದಿಂದ ಕಾಲೇಜುವರೆಗಿನ ದ್ವಿಪಥ ರಸ್ತೆ ದುರಸ್ತಿ ಕಾಮಗಾರಿ ಕಳೆದ ಮೂರು ತಿಂಗಳಿನಿಂದ ಕುಂಟುತ್ತ ಸಾಗಿರುವದಕ್ಕೆ, ಕಾಮಗಾರಿ ವಿಳಂವಾಗುತ್ತಿರುವುದಕ್ಕೆ ನರೇಗಲ್ಲ ಪಟ್ಟಣದ ವಿದ್ಯಾರ್ಥಿಗಳು, ಸಾರ್ವಜನಿಕರು ಪಟ್ಟಣ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ ಕಾಮಗಾರಿಯನ್ನು ಶೀಘ್ರವಾಗಿ ಮುಕ್ತಾಯಗೊಳಿಸುವಂತೆ ಮುಖ್ಯಾಧಿಕಾರಿ ಮತ್ತು ಇಂಜಿನಿಯರರನ್ನು ಒತ್ತಾಯಿಸಿದರು.
ಸಾರ್ವಜನಿಕರ ಪರವಾಗಿ ಮಾತನಾಡಿದ ರಘುನಾಥ ಕೊಂಡಿ, ಈ ಕಾಮಗಾರಿಗೆ ಯಾರೂ ದಿಕ್ಕು ದೆಸೆ ಇಲ್ಲದಂತಾಗಿದೆ. ನಿಮ್ಮ ಬೇಜವಾಬ್ದಾರಿತನದಿಂದ ಇಂದು ಸಹಸ್ರಾರು ವಿದ್ಯಾರ್ಥಿಗಳು, ಸಾರ್ವಜನಿಕರು ತೊಂದರೆ ಎದುರಿಸುವಂತಾಗಿದೆ. ಇದು ಹೀಗೇ ಮುಂದುವರೆದರೆ ನಿಮ್ಮನ್ನು ಕೈ ಹಿಡಿದು ಪ್ರಶ್ನಿಸಬೇಕಾಗುತ್ತದೆ ಎಂದರು.
ಮಂಜುನಾಥ ಹೆಗಡೆ ಮಾತನಾಡಿ, ಕಳೆದ ಮಾರ್ಚ್ 8ಕ್ಕೆ ಶಾಸಕರು ಈ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಅದು ಕಳೆದು ಒಂದು ತಿಂಗಳ ನಂತರ ಗುತ್ತಿಗೆದಾರರು ಕಾರ್ಯ ಪ್ರಾರಂಭಿಸಿದರು. ಈ ಕಾರ್ಯವನ್ನು ಮುಗಿಸದೆ ಅವರು ಅನಗತ್ಯ ವಿಳಂಬ ಮಾಡುತ್ತಿರುವದರಿಂದ ಅಲ್ಲಿ ಸಂಚರಿಸಲು ನಮಗೆ ತೀವ್ರ ತೊಂದರೆಯಾಗುತ್ತಿದೆ ಎಂದರು.
ಸಂತೋಷ ಮಣ್ಣೊಡ್ಡರ ಮಾತನಾಡಿ, ಈ ಕಾಮಗಾರಿ ಈ ವರ್ಷ ಮುಗಿಯುವ ಹಾಗೆ ಕಾಣುತ್ತಿಲ್ಲ. ನಿಮಗೆ ಇನ್ನೂ ಒಂದು ವಾರ ಗಡುವು ಕೊಡುತ್ತೇವೆ. ಅಷ್ಟರೊಳಗೆ ಕಾಮಗಾರಿ ಪ್ರಾರಂಭವಾಗಬೇಕು. ಇಲ್ಲವಾದರೆ ಪಟ್ಟಣ ಪಂಚಾಯಿತಿ ಮುಂದೆ ಅನಿರ್ದಿಷ್ಟಾವಧಿ ಸತ್ಯಾಗ್ರಹ ಹೂಡುತ್ತೇವೆ ಎಂದರು.
ಪ್ರತಿಭಟನಾಕಾರರು ನೀಡಿದ ಮನವಿಯನ್ನು ಪ.ಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತಪ್ಪ ನೂಲ್ಕಿ, ಅಲ್ಲಾಬಕ್ಷಿ ನದಾಫ್, ಮಹೇಶ ಶಿವಶಿಂಪರ, ಕರವೇ ಅಧ್ಯಕ್ಷ ನಿಂಗಪ್ಪ ಹೊನ್ನಾಪೂರ, ಶಿವಾನಂದ ಇಟಗಿ, ನವೀನ ಗುರುವಡೆಯರ, ರವಿಗೊಲ್ಲರ, ರಾಮು ನಿರಂಜನ, ವೀರೇಶ ಬಿನ್ನಾಳ, ನಾಗರಾಜ ಜಿರ್ಲ, ಗಂಗಾಧರ ಮಡಿವಾಳರ, ಶಿವು ಹೂಗಾರ, ಪವನ ಕಟ್ಟಿಮನಿ, ವೀರಯ್ಯ ಸೌಸಿಮಠ, ಮುತ್ತು ದಿಂಡೂರ, ಪ್ರತೀಕ್, ಮಹಾಂತೇಶ ಗುರುವಡೆಯರ, ವಿನೋದ ರಾಯಬಾಗಿ ಮುಂತಾದವರಿದ್ದರು.
ಪ.ಪಂ ಇಂಜಿನಿಯರ್ ಕಾಟೇವಾಲೆ ಮಾತನಾಡಿ, ನಮಗೂ ಸಹ ಈ ಕಾರ್ಯ ತಲೆ ನೋವಾಗಿದೆ. ಬೇಗನೆ ಮುಗಿದು ಸಾರ್ವಜನಿಕರಿಗೆ ಅನುಕೂಲವಾದರೆ ನಮಗೂ ಸಂಸತವಾಗುತ್ತದೆ. ಆದ್ದರಿಂದ ಸಂಬಂಧಿಸಿದವರಿಗೆ ನಾವು ಒತ್ತಾಯಿಸಿ ಬೇಗನೆ ಕಾಮಗಾರಿ ಮುಕ್ತಾಯ ಮಾಡುವಂತೆ ಆಗ್ರಹಿಸುತ್ತೇವೆ ಎಂದರು.