ಬೆಳ್ಳಾನ ಬಿಳಿ ಎತ್ತು ಬೆಳ್ಳಿಯ ಬಾರಿ ಕೋಲು;
ಬಂಗಾರದ ಸೆಡ್ಡೆ ಬಲಗೈಲಿ ಹಿಡಕೊಂಡು
ಹೊನ್ನ ಬಿತ್ಯಾರೋ ಹೊಳಿಸಾಲ…..||
ಎನ್ನುವ ಲೋಕಾರೂಢಿ ಜಾನಪದ ನುಡಿಯನ್ನು ಕೇಳಿರುತ್ತೇವೆ. ಈ ಜಾನಪದ ನುಡಿಪದದಲ್ಲಿ ರೈತ ತನ್ನ ಎತ್ತುಗಳ ಮೇಲಿರಿಸಿರುವ ಪ್ರೀತಿ, ಅದಕ್ಕೆ ಪ್ರತಿಯಾಗಿ ಎತ್ತುಗಳು ಆತನನ್ನು ಪ್ರೀತಿಸುವ ಪರಿಯನ್ನು ಬಣ್ಣಿಸುತ್ತದೆ. ಎತ್ತುಗಳು ಹೊಲದೊಳಗೆ ಕಾಲಿಟ್ಟರೆ ಅಲ್ಲಿ ಹೊನ್ನು ಕೂಡ ಬೆಳೆಯಬಹುದು ಎಂಬುದು ರೈತರ ನಂಬಿಕೆ. ರೈತರು ಮನೆಗಳಲ್ಲಿ ಅವುಗಳನ್ನು ಬಸವಣ್ಣ ಎಂದು ಕರೆಯುತ್ತಾರೆ. ಇಂತಹ ಎತ್ತುಗಳು ಎಂದರೆ ರೈತರಿಗೆ ಪ್ರಾಣ. ರೈತ-ಮಣ್ಣು-ಎತ್ತುಗಳು ಈ ಮೂರರ ಬಂಧವನ್ನು ಯಾರಿಂದಲೂ ಬಿಡಿಸಲಾಗದು.
ಎಷ್ಟೋ ರೈತರು ಇಂದಿಗೂ ಬೆಳಗ್ಗೆ ಎದ್ದ ಕೂಡಲೇ ಎತ್ತುಗಳ ಮುಖ ನೋಡುವ ಅಭ್ಯಾಸ ಹೊಂದಿದ್ದಾರೆ. ಹಗಲಿರುಳು ತನ್ನ ಏಳಿಗೆಗೆ ಶ್ರಮಿಸುವ ಎತ್ತುಗಳನ್ನು ರೈತರು ದೇವರಂತೆ ಕಾಣುವುದು. ಈ ವರ್ಷದ ಜೇಷ್ಠ ಮಾಸದ ಜೂನ್ 10, 11ರಂದು ಉತ್ತರ ಕರ್ನಾಟಕದ ಎಲ್ಲೆಡೆ ಕಾರ ಹುಣ್ಣಿಮೆ ಹಬ್ಬವನ್ನು ಸಂಭ್ರದಿAದ ಆಚರಣೆ ಮಾಡುತ್ತಾರೆ. ಇಂಥ ಸಂಭ್ರಮದ ಹೊಸ್ತಿಲಲ್ಲಿರುವ ರೈತನ ಬಾಳನ್ನು ಹಸನು ಮಾಡುವ ಎತ್ತುಗಳಿಗೆ ಕಾರ ಹುಣ್ಣಿಮೆಯಲ್ಲಿ ಪೂಜೆ ಸಲ್ಲಿಸಿದಂತೆ, ಮಣ್ಣಿನ ಎತ್ತಿನ ಮೂರ್ತಿ ಮಾಡಿ ಪೂಜಿಸುವುದು ರೂಢಿ ನಮ್ಮ ಹಳ್ಳಿಗಳಲ್ಲಿ ನಡೆದುಕೊಂಡು ಬಂದಿದೆ. ಹಾಗಾಗಿ ರಾಮಗೇರಿ, ಲಕ್ಷ್ಮೇಶ್ವರ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಭಾಗಗಳ ಮಂದಿಗೆ ಈ ಹಬ್ಬದ ಸಂಭ್ರಮ ಹೇಳತೀರದು.
ಕಾರ ಹುಣ್ಣಿಮೆಯ ದಿನದಂದು ಸೂರ್ಯನ ತೇಜೋರಶ್ಮಿ ಕಿರಣಗಳನ್ನು ಸ್ವಾಗತಿಸಲಾಗುತ್ತದೆ. ಹಿಂದಿನ ಮತ್ತು ಇಂದಿನ ಗ್ರಾಮೀಣ ಭಾಗದಲ್ಲಿ ಇಂದಿಗೂ ಕೃಷಿಗೆ ಎತ್ತುಗಳೇ ಆಧಾರವಾಗಿವೆ. ಹೀಗಾಗಿ ರೈತರು ಎತ್ತುಗಳನ್ನು ಪೂಜನೀಯ ಭಾವದಿಂದ ಕಾಣುತ್ತಾರೆ. ಪ್ರತಿ ವರ್ಷ ರೈತರು ಉಳುಮೆಗೆ ಎತ್ತುಗಳನ್ನು ಬಳಸುತ್ತಾರೆ. ಬೇಸಿಗೆಯ ಸುಡು ಬಿಸಿಲಿನಲ್ಲಿ ಎತ್ತುಗಳಿಂದ ಉಳುಮೆ ಮಾಡುವ ರೈತರು, ಕಾರ ಹುಣ್ಣಿಮೆಯ ದಿನದಂದು ಎತ್ತುಗಳಿಗೆ ತಮ್ಮ ಕೃತಜ್ಞತೆಯನ್ನು ಸಮರ್ಪಿಸುತ್ತಾರೆ. ಅವುಗಳನ್ನು ಪೂಜೆ ಮಾಡಿ, ಅವುಗಳ ಸೇವೆಯನ್ನು ಸ್ಮರಿಸುತ್ತಾರೆ. ಕೆಲವು ಗ್ರಾಮಗಳಲ್ಲಿ ಕಾರ ಹುಣ್ಣಿಮೆಯ ದಿನ ಸಂಜೆ ಎತ್ತುಗಳನ್ನು ಊರಿನ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಿ ಇಡೀ ಊರಿಗೆ ಊರೇ ಸಂಭ್ರಮದಲ್ಲಿ ಮುಳುತ್ತದೆ. ಇದರೊಂದಿಗೆ ಎತ್ತುಗಳನ್ನು ಬೆಂಕಿಯಲ್ಲಿ ಹಾಯಿಸಿ (ಕಿಚ್ಚು ಹಾಯಿಸಿ), ಕರಿ ಹರಿಯುವ ಮೂಲಕ ಅವುಗಳ ಸಾಮರ್ಥ್ಯ ಅಳೆಯುವ ಆಚರಣೆ ಕೂಡ ಕೆಲವೆಡೆ ಜಾರಿಯಲ್ಲಿದೆ.
ಕಾರ ಹುಣ್ಣಿಮೆ ಹಿಂದಿನ ದಿನ ಹೊನ್ನುಗ್ಗಿ ದಿನ. ಈ ದಿನ ರಾತ್ರಿ ರೈತರು ಎತ್ತುಗಳಿಗೆ ಬಾಯಿ ಮೂಲಕ ಅರಿಶಿಣ ಪುಡಿ, ಹತ್ತಿಕಾಳುಗಳು ಮತ್ತು ತತ್ತಿ ಒಡೆದು ಗೊಟ್ಟಗಳ ಸಹಾಯದಿಂದ ಬಾಯಲ್ಲಿ ಹಾಕಿ, ಮರುದಿನ ಕರಿ ಹರಿಯಲು ಅಣಿ ಮಾಡುತ್ತಾರೆ. ಮರುದಿನವೇ ಕಾರ ಹುಣ್ಣಿಮೆ. ಅಂದು ಬೆಳಿಗ್ಗೆ ಎತ್ತುಗಳ ಮೈ ತೊಳೆದು, ಅವುಗಳಿಗೆ ಬಣ್ಣ ಹಚ್ಚುತ್ತಾರೆ. ಹಬ್ಬಕ್ಕೊಂದೆರಡು ದಿನಗಳ ಮುಂಚೆಯೇ ಅಂಗಡಿಗಳಿಗೆ ಹೋಗಿ, ಬಣ್ಣ ಬಣ್ಣದ ಗುಲಾಲ ಮತ್ತು ರಿಬ್ಬನ್ನೆಲ್ಲಾ ತಂದು ಸಿದ್ಧ ಪಡಿಸಿಕೊಂಡು ಹುಣ್ಣಿಮೆ ಹಬ್ಬದ ದಿನ ತಮ್ಮ ದನಕರುಗಳಿಗೆ ಅದರಲ್ಲೂ ವಿಶೇಷವಾಗಿ ಹೋರಿಗಳನ್ನು ಕೆರೆ ಕಟ್ಟೆಗಳ ಬಳಿಗೆ ಕರೆದುಕೊಂಡು ಹೋಗಿ ಅವುಗಳ ಮೈ ತೊಳೆದು, ಕೋಡುಗಳನ್ನು ಕತ್ತಿಯಿಂದ ಸವರಿ ಅವುಗಳಿಗೆ ವಿವಿಧ ಬಣ್ಣಗಳನ್ನು ಬಳಿದು, ಹಣೆಗಳಿಗೆ ಬಾಸಿಂಗ, ಹಣೆಪಟ್ಟಿ, ಘಂಟೆ, ಅದರ ಜೊತೆಗೆ ಬಣ್ಣ ಬಣ್ಣದ ಉಸಿರುಬುಡ್ಡೆ (ಬಲೂನು)ಗಳನ್ನು ಕಟ್ಟಿ ಅವುಗಳ ದೇಹಕ್ಕೆ ವಿವಿಧ ಬಣ್ಣದ ಗುಲಾಲುಗಳಿಂದ ಚಿತ್ತಾರ ಬಿಡಿಸಿ ಕೊರಳಿಗೆ ಮತ್ತು ಕಾಲ್ಗಳಿಗೆ ಚಂದನೆಯ ಗೆಜ್ಜೆಗಳನ್ನು ಕಟ್ಟಿ ವಿವಿಧ ಅಲಂಕಾರಿಕ ವಸ್ತುಗಳನ್ನು ಹಾಕುತ್ತಾರೆ. ನಂತರ ದೇವಸ್ಥಾನಗಳಿಗೆ ಎತ್ತುಗಳನ್ನು ಒಯ್ದು, ಕರಿ ಹರಿದು, ಎತ್ತುಗಳಿಗೆ ತೊಂದರೆಯಾಗದಂತೆ ದೇವರಲ್ಲಿ ಸ್ಮರಿಸಿ ಬರುತ್ತಾರೆ.
ಕಾರ ಹುಣ್ಣಿಮೆಯ ದಿನ ಎತ್ತುಗಳನ್ನು ಪೂಜನೀಯ ಭಾವದಿಂದ ರೈತರು ಕಾಣುತ್ತಾರೆ. ಅನೇಕ ಕಡೆ ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ ಮಾಡಲಾಗುತ್ತದೆ. ಅನೇಕ ಕಡೆ ಕಾರ ಹುಣ್ಣಿಮೆಯ ಸಂದರ್ಭದಲ್ಲಿ ಎತ್ತಿನ ಬಂಡಿಯನ್ನು ಓಡಿಸಲಾಗುತ್ತದೆ. ಕೊಬ್ಬರಿ ಹೋರಿಯನ್ನು ಓಡಿಸುವ ಸಂಪ್ರದಾಯವಿದೆ. ರೈತರು ಎತ್ತುಗಳಿಗೆ ಪೂಜೆ ಮಾಡಿದರೆ, ಗೌಳಿ ಸಮಾಜದವರು ತಮ್ಮ ಜೀವನಕ್ಕೆ ಆಧಾರವಾಗಿರುವ ಎಮ್ಮೆ, ಹಸುಗಳನ್ನು ಪೂಜಿಸುತ್ತಾರೆ.
ಈ ದಿನ ಮಕ್ಕಳಿಗಂತೂ ಸಡಗರ. ಈ ವೇಳೆ ಪುಟ್ಟ ಮಕ್ಕಳು, ತಮ್ಮಷ್ಟೇ ಪುಟ್ಟದಾಗಿರುವ ಕರುಗಳನ್ನು ತೊಳೆದು, ಸಿಂಗಾರ ಮಾಡಿ, ಊರಿನ ಓಣಿಗಳಲ್ಲಿ ಓಡಾಡಿಸುವುದೂ ಉಂಟು. ಕಾರ ಹುಣ್ಣಿಮೆ ಹಬ್ಬದಂದು ಕೇವಲ ಎತ್ತುಗಳಿಗಷ್ಟೇ ಅಲ್ಲದೇ ಮನೆ ಮಂದಿಯೆಲ್ಲಾ ಹೊಸ ಬಟ್ಟೆಗಳನ್ನು ತೊಟ್ಟು ಇಡೀ ದಿನ ತಮ್ಮೆಲ್ಲಾ ಕೃಷಿ ಚಟುವಟಿಕೆಗಳಿಂದ ತಾವೂ ಮತ್ತು ತಮ್ಮ ದನಕರುಗಳು ಮುಕ್ತವಾಗಿದ್ದು, ಹೋಳಿಗೆ, ಕಡುಬು ಮತ್ತು ವಿವಿಧ ಬಗೆಯ ಭಕ್ಷ್ಯ ಭೋಜನಗಳನ್ನು ಸಿದ್ದಪಡಿಸಿ ಮೊದಲು ದೇವರಿಗೆ ನೈವೇದ್ಯ ಮಾಡಿ, ನಂತರ ತಮ್ಮ ದನ ಕರುಗಳಿಗೆ ಒಳ್ಳೆಯ ಮೇವುಗಳನ್ನು ಉಣಬಡಿಸಿ ನಂತರ ಮನೆಯವರೆಲ್ಲರೂ ಒಟ್ಟಿಗೆ ಸಂತೋಷದಿಂದ ಊಟ ಮಾಡಿ ಸಂಭ್ರಮಿಸುತ್ತಾರೆ.
ಈ ಮೂಕ ಪ್ರಾಣಿಗಳು ತನ್ನ ಒಡೆಯ ರೈತನ ಮೇಲಿರಿಸಿರುವ ಪ್ರೀತಿ, ರೈತ ತನ್ನ ಜೋಡೆತ್ತುಗಳ ಬಗ್ಗೆ ತೋರಿಸುವ ಅಕ್ಕರೆ, ಕಾಳಜಿ, ಮುತುವರ್ಜಿ ಎಲ್ಲವನ್ನೂ ನೋಡುತ್ತಿದ್ದರೆ ಭಾವುಕರ ಕಣ್ಣುಗಳು ತೇವಗೊಳ್ಳುತ್ತವೆ. ಅವುಗಳಿಗೆ ಕಾರ ಹುಣ್ಣಿಮೆ ಹಬ್ಬದ ಅಂಗವಾಗಿ ಕೃತಜ್ಞತೆಯನ್ನು ಸಲ್ಲಿಸೋಣ.
– ಬಸವರಾಜ ಎಮ್.ಯರಗುಪ್ಪಿ.
ರಾಮಗೇರಿ, ಲಕ್ಷ್ಮೇಶ್ವರ