HomeGadag Newsಬೆಣ್ಣೆಹಳ್ಳ ಹರಿವಿನ ಗ್ರಾಮಗಳಲ್ಲಿ ಕಟ್ಟೆಚ್ಚರ

ಬೆಣ್ಣೆಹಳ್ಳ ಹರಿವಿನ ಗ್ರಾಮಗಳಲ್ಲಿ ಕಟ್ಟೆಚ್ಚರ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಬೆಣ್ಣೆಹಳ್ಳ ಹಾಗೂ ನದಿಯ ಪ್ರವಾಹಕ್ಕೊಳಗಾಗುವ ಗ್ರಾಮಗಳ ಸಾರ್ವಜನಿಕರ ಸುರಕ್ಷತೆಗೆ ಸ್ಥಳೀಯ ಅಧಿಕಾರಿಗಳು ಪ್ರಥಮಾದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಿಂದ ವಿಡಿಯೋ ಕಾನ್ಫರನ್ಸ್ ಮೂಲಕ ಗುರುವಾರ ಬೆಣ್ಣೆಹಳ್ಳ ಹಾಗೂ ನದಿಯ ಪ್ರವಾಹದಿಂದ ತೊಂದರೆಗೊಳಗಾಗುವ ಗ್ರಾಮಗಳ ಸುರಕ್ಷತೆ ಕುರಿತಂತೆ ತಾಲೂಕಾಡಳಿತದೊಂದಿಗೆ ಪ್ರವಾಹ ಪರಿಸ್ಥಿತಿ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಳೆ ನೀರು ಚರಂಡಿ ಹಾಗೂ ಪ್ರಮುಖ ಕಾಲುವೆಗಳ ಮೂಲಕ ಸರಾಗವಾಗಿ ಮುಂದೆ ಸಾಗುವಂತೆ ಇರುವ ಗಿಡ-ಕಂಟೆ, ಪ್ಲಾಸ್ಟಿಕ್ ತೆರವುಗೊಳಿಸಬೇಕು. ಇದರಿಂದ ವಿನಾಕಾರಣ ಮಳೆ ನೀರು ಮನೆಗಳಿಗೆ ನುಗ್ಗುವುದನ್ನು ತಡೆಯಬಹುದಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಎಲ್ಲರೂ ಕೇಂದ್ರ ಸ್ಥಾನದಲ್ಲಿದ್ದು ಅತೀವೃಷ್ಟಿ, ಪ್ರವಾಹ ಪರಿಸ್ಥಿತಿ ಎದುರಾದಲ್ಲಿ ಸಮರ್ಪಕವಾಗಿ ಎದುರಿಸಬೇಕು. ಜನ-ಜಾನುವಾರುಗಳ ಜೀವ ಹಾನಿ ತಡೆಯುವುದರೊಂದಿಗೆ ಆಸ್ತಿ ರಕ್ಷಣೆ ಮಾಡಬೇಕೆಂದು ಹೇಳಿದರು.

ಈ ಹಿಂದೆ ಅಧಿಕ ಪ್ರಮಾಣದ ಪ್ರವಾಹ ಪರಿಸ್ಥಿತಿ ಎದುರಾದಾಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಅನೇಕ ಅಧಿಕಾರಿಗಳು ಅನುಭವ ಹೊಂದಿದವರಾಗಿದ್ದಾರೆ. ಪ್ರವಾಹ ಪರಿಸ್ಥಿತಿಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಲು ಎಲ್ಲ ಅಧಿಕಾರಿಗಳು ಸನ್ನದ್ಧರಾಗಬೇಕೆಂದು ಸೂಚಿಸಿದರು.

ನವಿಲುತೀರ್ಥ ಡ್ಯಾಂ 37.731 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು, ನವಿಲುತೀರ್ಥ ಡ್ಯಾಮ್‌ನಿಂದ ಅಪಾರ ಪ್ರಮಾಣದ ನೀರು ಬಿಟ್ಟಲ್ಲಿ ಮುಂದಿನ 18 ಗಂಟೆಯೊಳಗಾಗಿ ನೀರು ಜಿಲ್ಲೆಗೆ ಪ್ರವೇಶ ಮಾಡಲಿದ್ದು, ಡ್ಯಾಂನಿಂದ ನೀರು ಹೊರಬಿಡುವ ಮಾಹಿತಿ ದೊರೆತ ತಕ್ಷಣ ತಾಲೂಕಾಡಳಿತಗಳು ಪ್ರವಾಹ ಪೀಡಿತಕ್ಕೊಳಗಾಗುವ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸುವ ಮೂಲಕ ಆಗುವ ಜೀವ ಹಾನಿ ತಪ್ಪಿಸಬೇಕು ಎಂದರು.

ನವಲಗುಂದ ಸೇರಿದಂತೆ 5 ತಾಲೂಕುಗಳ ಮಳೆಯಿಂದ ಅಪಾರ ಪ್ರಮಾಣದ ನೀರು ಬೆಣ್ಣೆಹಳ್ಳ ತಲುಪಿ ಅಲ್ಲಿಂದ ಜಿಲ್ಲೆಗೆ ಒಮ್ಮೆಲೇ ನೀರು ಹರಿದು ಬರಲಿದೆ. ಇದರಿಂದ ನರಗುಂದ ಹಾಗೂ ರೋಣ ತಾಲೂಕಿನ ಹಲವು ಗ್ರಾಮಗಳು ಪ್ರವಾಹಕ್ಕೊಳಗಾಗುವ ಸಂಭವವಿದ್ದು, ಈಗಾಗಲೇ ತಾಲೂಕಾ ಆಡಳಿತ ಅಂತಹ ಗ್ರಾಮಗಳನ್ನು ಗುರುತಿಸಿದೆ. ನೀರಿನ ಪ್ರಮಾಣಕ್ಕನುಗುಣವಾಗಿ ಅಧಿಕಾರಿಗಳು ಪ್ರವಾಹ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಬೇಕು ಎಂದು ನಿರ್ದೇಶಿಸಿದರು.

ಪ್ರವಾಹ ಪರಿಸ್ಥಿತಿ ತಲೆದೋರಿದಲ್ಲಿ ಅಗ್ನಿಶಾಮಕ ಇಲಾಖೆ ತಂಡ ತಕ್ಷಣ ಕಾರ್ಯಪ್ರವೃತ್ತವಾಗಬೇಕು. ತಾಲೂಕಾಡಳಿತದೊಂದಿಗೆ ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯ ಸಾಧಿಸುವ ಮೂಲಕ ಪ್ರವಾಹ ಪರಿಸ್ಥಿತಿ ನಿರ್ವಹಣೆ ಮಾಡಬೇಕು. ತಗ್ಗುಪ್ರದೇಶಗಳಲ್ಲಿ ಹಾಗೂ ಶಿಥಿಲಾವಸ್ಥೆಯಲ್ಲಿರುವ ಮಣ್ಣಿನ ಮನೆಗಳಲ್ಲಿ ವಾಸಿಸುವವರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.

ಉಪವಿಭಾಗಾಧಿಕಾರಿ ಗಂಗಪ್ಪ ಎಂ ಮಾತನಾಡಿ, ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಈಗಾಗಲೇ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ. ಜನಜಾನುವಾರು ಸ್ಥಳಾಂತರಕ್ಕೆ ಸ್ಥಳ ಗುರುತಿಸಿಟ್ಟುಕೊಳ್ಳಲಾಗಿದೆ. ಮೊದಲು ಪ್ರವಾಹಕ್ಕೀಡಾಗುವ ಗ್ರಾಮಗಳ ಪಟ್ಟಿಯನ್ನು ಮಾಡಿಟ್ಟುಕೊಂಡಿದ್ದು ಸಂದರ್ಭಕ್ಕನುಸಾರವಾಗಿ ಸಮರ್ಪಕವಾಗಿ ಪ್ರವಾಹ ನಿರ್ವಹಣೆಗೆ ಕ್ರಮ ವಹಿಸಲಾಗುವುದು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಸೇರಿದಂತೆ ತಾಲೂಕಾ ತಹಸೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ತಾಲೂಕಾ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಮಾತನಾಡಿ, ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಎಲ್ಲ ಅಧಿಕಾರಿಗಳು ಸನ್ನದ್ಧರಾಗಬೇಕು. ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಬೇಕು. ಕಾಳಜಿ ಕೇಂದ್ರಗಳಲ್ಲಿ ಅಗತ್ಯಮೂಲಭೂತ ಸೌಲಭ್ಯಗಳು ಇರುವಂತೆ ಪರಿಶೀಲಿಸಬೇಕು. ಸಂದರ್ಭಾನುಸಾರ ಸಾರ್ವಜನಿಕರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಿದಲ್ಲಿ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸಬೇಕೆಂದು ಸೂಚಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!