HomeGadag Newsವೃದ್ಧಾಶ್ರಮಗಳು ಹೆಚ್ಚುತ್ತಿರುವುದು ವಿಷಾದನೀಯ

ವೃದ್ಧಾಶ್ರಮಗಳು ಹೆಚ್ಚುತ್ತಿರುವುದು ವಿಷಾದನೀಯ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಮುಂಡರಗಿ: ತವರುಮನೆ ಬಿಟ್ಟು, ಕೊಟ್ಟ ಮನೆಗೆ ಬಂದು ಆ ಮನೆ ಬೆಳಗುವಂತೆ ಜೀವ ಸವೆಸಿ ಹೆತ್ತ ಮಕ್ಕಳನ್ನು ಅಕ್ಕರೆಯಿಂದ ಸಾಕಿ-ಸಲುಹಿ ಮಕ್ಕಳಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ ಆ ಮಹಾತಾಯಿಯ ಋಣವನ್ನು ಎಷ್ಟು ಜನ್ಮವೆತ್ತರೂ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಆ ತಾಯಿ ಕಣ್ಣೀರು ಹಾಕಿದರೆ ಹಾಕಿಸಿದವರಿಗೂ ಭವಿಷ್ಯದಲ್ಲಿ ಕೇಡು ಹಾಗೂ ಕಣ್ಣೀರು ತಪ್ಪಿದ್ದಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

ಪಟ್ಟಣದ ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಜಗದ್ಗುರು ಅನ್ನದಾನೀಶ್ವರ ವಿದ್ಯಾಸಮಿತಿ, ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ನಡೆದ ಅವ್ವನನ್ನು ಕುರಿತು ವಿಶೇಷ ಉಪನ್ಯಾಸ, 1831ನೇ ಮಾಸಿಕ ಶಿವಾನುಭವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡಿದ ತ್ಯಾಗಮಯಿ ಜೀವನದುದ್ದಕ್ಕೂ ಖುಷಿಯಾಗಿರಬೇಕು. ಆದರೆ, ಇತ್ತೀಚಿನ ಕೌಟುಂಬಿಕ ವ್ಯವಸ್ಥೆಯಲ್ಲಿ ಕುಟುಂಬ ಎಂದರೆ ಗಂಡ-ಹೆಂಡತಿ ಎನ್ನುವಂತಾಗಿದೆ. ಕೂಡು ಕುಟುಂಬಗಳು ದೂರವಾಗಿ ಬಹಳ ದಿನಗಳೇ ಆಗಿವೆ. ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವದು ವಿಷಾದನೀಯ. ಇದಕ್ಕೆಲ್ಲ ಕಾರಣ ಸಂಸ್ಕಾರಯುತ ಶಿಕ್ಷಣದ ಕೊರತೆಯೇ ಮೂಲ ಎಂದರು.

ಸಮಾಜಕ್ಕೆ ಕೈಲಾದಷ್ಟು ಸಹಾಯ ಮಾಡುವ ಮೂಲಕ ಅವ್ವ ಸೇವಾ ಟ್ರಸ್ಟ್ ಸಾರ್ಥಕತೆಯನ್ನು ಕಂಡುಕೊಳ್ಳುತ್ತಿದೆ. ಶ್ರೀಮಠದಲ್ಲಿ ದತ್ತಿ ನಿಧಿ ಸ್ಥಾಪಿಸಿ, ಆ ಮೂಲಕ ಪ್ರತಿವರ್ಷ ಕಾರ್ಯಕ್ರಮ ಆಯೋಜಿಸಿ ಸಮಾಜಕ್ಕೊಂದು ಉತ್ತಮ ಸಂದೇಶವನ್ನು ಕೊಡಿಸುವ ಕೆಲಸ ಮಾಡುತ್ತಾ ಬಂದಿದೆ. ತಮ್ಮ 84ನೇ ವಯಸ್ಸಿನಲ್ಲಿಯೂ ಶ್ರೀಗಳು ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುವ ಮೂಲಕ ಉತ್ತಮ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂಥ ಒಂದು ಭಾವನಾತ್ಮಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಸೌಭಾಗ್ಯ. ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯಗಳನ್ನು ಅರಿತು ಕೆಲಸ ಮಾಡಿದರೆ ಉತ್ತಮ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ಬಸವರಾಜ ಹೊರಟ್ಟಿಯಂತಹ ಹಿರಿಯರ ಮಾರ್ಗದರ್ಶನ ಸಮಾಜಕ್ಕೆ ಬೇಕಾಗಿದೆ ಎಂದರು.

ಗದಗ ಜಿಲ್ಲಾ ಅವ್ವ ಸೇವಾ ಟ್ರಸ್ಟ್ ಸಂಚಾಲಕ ಡಾ. ಬಸವರಾಜ ಧಾರವಾಡ, ಡಿಡಿಪಿಐ ಆರ್.ಎಸ್. ಬುರಡಿ ಮಾತನಾಡಿದರು. ಎಸ್‌ಪಿ ಬಿ.ಎಸ್. ನೇಮಗೌಡ, ಕಮಲಮ್ಮ ಹನಮಂತಗೌಡ ಪಾಟೀಲ, ಎಸ್.ಆರ್. ಚಿಗರಿ, ಮಂಜುನಾಥ ಕುಸುಗಲ್ಲ, ಜಾಫರ ಬಚೇರಿ, ಡಿ.ಟಿ. ಪಾಟೀಲ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತಲೂ ಹೆಚ್ಚು ಅಂಕ ಪಡೆದ ಶ್ರೀ ಜಗದ್ಗುರು ಅನ್ನದಾನೀಶ್ವರ ವಿದ್ಯಾಸಮಿತಿಯ 38ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಲಿಂಗರಾಜ ಪಾಟೀಲ, ಬಿ.ಇ.ಓ ಹೆಚ್.ಎಂ. ಪಡ್ನೇಶಿ, ಕರಬಸಪ್ಪ ಹಂಚಿನಾಳ, ನಾಗೇಶ ಹುಬ್ಬಳ್ಳಿ, ಆರ್.ಎಲ್. ಪೊಲೀಸ್‌ಪಾಟೀಲ, ವೀರನಗೌಡ ಗುಡದಪ್ಪನವರ, ದೇವಪ್ಪ ರಾಮೇನಹಳ್ಳಿ, ಎಸ್.ಎಂ. ಅಗಡಿ, ಎಸ್.ಎಸ್. ಗಡ್ಡದ, ಎಂ.ಎಚ್. ಪೂಜಾರ, ಎಸ್.ಜಿ. ಕೋಲ್ಮಿ ಮುಂತಾದವರು ಉಪಸ್ಥಿತರಿದ್ದರು.

ಡಾ. ಬಿ.ಜಿ. ಜವಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಎಸ್.ಎಸ್. ಮಠದ, ಆರ್.ಆರ್. ಇನಾಮದಾರ ಕಾರ್ಯಕ್ರಮ ನಿರೂಪಿಸಿದರು. ನಾಗಭೂಷಣ ಹಿರೇಮಠ ವಂದಿಸಿದರು.

ಸಾನ್ನಿಧ್ಯ ವಹಿಸಿದ್ದ ಜ. ನಾಡೋಜ ಅನ್ನಾದಾನೀಶ್ವರ ಮಹಾಸ್ವಾಮಿಗಳು ಮಾತನಾಡಿ, ಇತ್ತೀಚಿನ ಶಿಕ್ಷಣದಲ್ಲಿ ಸಂಸ್ಕಾರಯುತ ಹಾಗೂ ಮೌಲ್ಯಯುತ ಶಿಕ್ಷಣದ ಕೊರತೆಯಿದೆ. ಹೀಗಾಗಿ ಮಕ್ಕಳ ವ್ಯಕ್ತಿತ್ವವನ್ನು ಸಮಾಜಮುಖಿಯಾಗಿ ಕಟ್ಟಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ನಾವೆಲ್ಲರೂ ಯೋಚಿಸಬೇಕಾಗಿದೆ. ಬಸವರಾಜ ಹೊರಟ್ಟಿಯವರು ತಮ್ಮ ತಾಯಿಯ ಸಂಸ್ಮರಣೆ ಜೊತೆಗೆ ನಾಡಿನ ತಾಯಂದಿರನ್ನು ನೆನೆಯುತ್ತಿರುವುದು ಪುಣ್ಯದ ಕೆಲಸ ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!