ಮಂಡ್ಯ:- ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಗೃಹರಕ್ಷಕ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ಸರ್ಕಾರಿ ಕಚೇರಿಯಲ್ಲಿ ಮೋಜು ಮಸ್ತಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಂಡ್ಯದ ಪಾಂಡವಪುರದಲ್ಲಿ ತರಬೇತಿ ಹೆಸರಲ್ಲಿ ಅಧಿಕಾರಿಯು ಸಿಬ್ಬಂದಿಗಳ ಜೊತೆ ಗುಂಡು ತುಂಡಿನ ಮೋಜು ಮಸ್ತಿ ನಡೆಸಿರುವ ಆರೋಪ ಕೇಳಿ ಬಂದಿದೆ. ಸರ್ಕಾರಿ ಕಚೇರಿಯನ್ನೇ ಬಾರ್ ಮಾಡಿಕೊಂಡು ಮೋಜು ಮಾಡಿದ್ದಾರೆ. ಅಲ್ಲದೇ ಪಾರ್ಟಿಯಲ್ಲಿ ಡಿ.ಜೆ ಹಾಕಿಕೊಂಡು ಮಹಿಳಾ ಸಿಬ್ಬಂದಿಗೆ ಮದ್ಯ ಕುಡಿಸಿ ಅವರ ಜೊತೆ ಅಸಭ್ಯ ನೃತ್ಯ ಮಾಡಿರೋ ದೃಶ್ಯ ಕಂಡು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ವಿಶ್ವ ದಲಿತ ಮಹಾಸಭಾದ ಅಧ್ಯಕ್ಷ ಪೂರ್ಣಚಂದ್ರ ಎಂಬುವವರು, ಮಂಡ್ಯದ ಗೃಹರಕ್ಷಕ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ದ ಡಿ.ಸಿ ಎಸ್ಪಿಗೆ ದೂರು ನೀಡಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ಕಾರಿ ಕಚೇರಿಯಲ್ಲಿ ಪಾರ್ಟಿ ಮಾಡಿದರ ವಿರುದ್ದ ಕ್ರಮಕ್ಕೆ ದೂರಿನಲ್ಲಿ ಆಗ್ರಹಿಸಿದ್ದಾರೆ.