Homehubballiವಾರ್ಡ್ವಾರು ಸ್ವಚ್ಛತೆಗೆ ಆದ್ಯತೆ ನೀಡಿ

ವಾರ್ಡ್ವಾರು ಸ್ವಚ್ಛತೆಗೆ ಆದ್ಯತೆ ನೀಡಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಮಳೆಗಾಲದ ಸಮಯದಲ್ಲಿ ಅಧಿಕಾರಿಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ರೀತಿಯ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕಾಗುತ್ತದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಣೆ ಮಾಡಬೇಕು ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಹಾಗೂ ಶಾಸಕರಾದ ಅಬ್ಬಯ್ಯ ಪ್ರಸಾದ ಹೇಳಿದರು.

ಬುಧವಾರ ಸರ್ಕ್ಯೂಟ್ ಹೌಸ್‌ನಲ್ಲಿ ಹುಬ್ಬಳ್ಳಿ ಶಹರದಲ್ಲಿನ ಮಳೆ ಹಾನಿ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಮಳೆಯಾಗಿದೆ. ಹುಬ್ಬಳ್ಳಿಯಲ್ಲೂ ಸಹ ಹೆಚ್ಚು ಮಳೆಯಾಗಿದೆ. ಅಪಾರ ಪ್ರಮಾಣದ ಮಳೆಯಿಂದಾಗಿ ಸಾವಿರಾರು ಮನೆಗಳಿಗೆ ನೀರು ನುಗ್ಗಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಜನರಿಗೆ ಸರ್ಕಾರದಿಂದ ಪರಿಹಾರವನ್ನು ಒದಗಿಸುವ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ಭವಿಷ್ಯದ 10ರಿಂದ 15 ವರ್ಷದ ದೃಷ್ಟಿಕೋನವನ್ನು ಇಟ್ಟುಕೊಂಡು ಕಾಮಗಾರಿಗಳನ್ನು ಕೈಗೊಳ್ಳಬೇಕು. ಹಳೇ ಹುಬ್ಬಳ್ಳಿ ವೃತ್ತದ ರಸ್ತೆಯನ್ನು ದುರಸ್ತಿಗೊಳಿಸಬೇಕಾಗಿದೆ. ಸರ್ಕಾರದಿಂದ ಹೆಚ್ಚಿನ ಅನುದಾನ ತಂದರೂ ಸಹ ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ. ಅಧಿಕಾರಿಗಳು ಹೆಚ್ಚಿನ ಮುತುವರ್ಜಿಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಉತ್ತಮ ಕೆಲಸಗಳಾಗುತ್ತವೆ ಎಂದರು.

ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಮಳೆಯಿಂದ ಹಾನಿಯಾಗಿದೆಯೇ ಎಂಬುದನ್ನು ಗಮನಿಸಬೇಕು. ಚರಂಡಿಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಯಾವುದೇ ರೀತಿಯಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗದಂತೆ ನೋಡಿಕೊಳ್ಳಬೇಕು. ಪಾಲಿಕೆಯ ಆರೋಗ್ಯ ನಿರೀಕ್ಷಕರು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹುಬ್ಬಳ್ಳಿಯ ಉಣಕಲ್ ಕೆರೆಯಿಂದ ಗಬ್ಬೂರುವರೆಗೆ ಹರಿಯುವ ರಾಜ ಕಾಲುವೆಯನ್ನು ಸ್ವಚ್ಛ ಮಾಡಬೇಕು. ಜನರು ತ್ಯಾಜ್ಯವನ್ನು ಕಾಲುವೆಗೆ ಎಸೆಯದಂತೆ ಸೂಚನೆ ನೀಡಬೇಕು. ತ್ಯಾಜ್ಯದಿಂದಾಗಿ ರಾಜಕಾಲುವೆ ಹರಿಯುವ ಮಟ್ಟವನ್ನು ಬಿಟ್ಟು ಮನೆಗಳಿಗೆ ನೀರು ನುಗ್ಗುತ್ತದೆ. ರಾಜ ಕಾಲುವೆಯನ್ನು ಸ್ವಚ್ಛಗೊಳಿಸಿದ ಮಣ್ಣನ್ನು ಬೇರೆಡೆಗೆ ಸ್ಥಳಾಂತರಿಸಬೇಕಾಗುತ್ತದೆ. ಮಣ್ಣನ್ನು ಅಲ್ಲಿಯೇ ಬಿಟ್ಟರೆ ಮಳೆಯಾದಾಗ ಮರಳಿ ರಾಜಕಾಲುವೆಗೆ ಮಣ್ಣು ಸೇರುತ್ತದೆ. ಇದರಿಂದ ಸುಮಾರು 2 ಕೋಟಿಗೂ ಅಧಿಕ ಹಣ ವ್ಯರ್ಥವಾಗಲಿದೆ ಎಂದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ರುದ್ರೇಶ ಘಾಳಿ ಮಾತನಾಡಿ, ಸುಮಾರು 1188 ಮನೆಗಳಿಗೆ ಮಳೆ ನೀರು ನುಗ್ಗಿದೆ. 16 ಮನೆಗಳು ಬಿದ್ದು ಹೋಗಿವೆ. 3 ಮನೆಗಳಿಗೆ ಶೇ.50ರಷ್ಟು ಹಾನಿಯಾಗಿರುತ್ತವೆ. ರಾಜ ಕಾಲುವೆಯ ಸ್ವಚ್ಛತೆಗೆ ಗಮನ ಹರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಪ್ರೊಬೇಷನರಿ ಅಧಿಕಾರಿ ರಿತಿಕಾ ವರ್ಮಾ, ಹುಬ್ಬಳ್ಳಿ ಶಹರ ತಹಸೀಲ್ದಾರ ಕಲಗೌಡ ಪಾಟೀಲ, ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪಗೌಡ್ರ, ಪಾಲಿಕೆಯ ಸಹಾಯಕ ಆಯುಕ್ತ ವಿಜಯಕುಮಾರ್, ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದ ಅಧೀಕ್ಷಕ ಅಭಿಯಂತರ ಟಿ.ಪ್ರದೀಪ, ಲೋಕೋಪಯೋಗಿ ಇಲಾಖೆಯ ಎಇಇ ಎಚ್.ಜಿ. ಗುಂಡಳ್ಳಿ, ವಲಯ ಸಹಾಯಕ ಆಯುಕ್ತರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಮಾತನಾಡಿ, ಈಗಾಗಲೇ ಜಿಲ್ಲೆಯಾದ್ಯಂತ ಅಪಾರ ಪ್ರಮಾಣದ ಮಳೆಯಾಗಿದೆ. ಸಾಕಷ್ಟು ಹಾನಿಗಳೂ ಆಗಿದ್ದು, ಎಸ್‌ಡಿಆರ್‌ಎಫ್ ತಂಡ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ರಸ್ತೆಗಳ ದುರಸ್ತಿ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೇಸಿಗೆ ಅವಧಿಯಲ್ಲೇ ಚರಂಡಿ, ನಾಲಾಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೆ ಚರಂಡಿಗಳನ್ನು ಸ್ವಚ್ಛಗೊಳಿಸದಿರುವುದು ಗಮನಕ್ಕೆ ಬಂದಿದೆ. ಸ್ವಚ್ಛತೆ ಕುರಿತಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!