ವಿಜಯಸಾಕ್ಷಿ ಸುದ್ದಿ, ರಾಯಚೂರು
ಮಹಾಮಾರಿ ರಾಜ್ಯದಲ್ಲಿ ಸಾಕಷ್ಟು ಪ್ರಾಣಗಳನ್ನು ಬಲಿ ಪಡೆದಿದೆ. ಇದರಿಂದಾಗಿ ಹಲವು ಕುಟುಂಬಗಳು ಬೀದಿಗೆ ಬಂದಿವೆ. ಹಲವು ಮಕ್ಕಳು ಅನಾಥರಾಗಿದ್ದಾರೆ. ಈ ಹೆಮ್ಮಾರಿಯಿಂದ ಜಿಲ್ಲೆಯಲ್ಲಿನ ಒಂದು ಮಗು ಕೂಡ ತಬ್ಬಲಿಯಾಗಿದೆ.
ದೇವದುರ್ಗದ ನಾಲ್ಕು ವರ್ಷದ ಪುಟ್ಟ ಬಾಲಕ ಗಿರೀಶ್ ಒಂದೇ ತಿಂಗಳ ಅಂತರಲ್ಲಿ ತಂದೆ – ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥನಾಗಿದ್ದಾನೆ. ಮಹಾಮಾರಿಯಿಂದಾಗಿ ತಂದೆ ದೇವೇಂದ್ರಪ್ಪ ಏ. 27ರಂದು ಸಾವನ್ನಪ್ಪಿದ್ದರೆ, ತಾಯಿ ಚಂದ್ರಕಲಾ ಮೇ. 14ರಂದು ಸಾವನ್ನಪ್ಪಿದ್ದರು.
ಕೊರೊನಾದಿಂದ ಒದ್ದಾಡುತ್ತಿದ್ದ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದ ಚಂದ್ರಕಲಾ ಅವರನ್ನು ಉಳಿಸಿಕೊಳ್ಳಲು ವೈದ್ಯರು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ಮಹಾಮಾರಿಯ ಅಟ್ಟಹಾಸದ ಎದುರು ವೈದ್ಯರ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಹೀಗಾಗಿ ಚಂದ್ರಕಲಾ ಅವರು ಉಳಿಯಲಿಲ್ಲ. ಅದರೊಂದಿಗೆ ಮಗುವೂ ಉಳಿಯಲಿಲ್ಲ. ಇದರಿಂದಾಗಿ ಈ ದಂಪತಿಯ ಮೊದಲ ಮಗ ಅನಾಥವಾಗಿದ್ದಾನೆ.
ದೇವದುರ್ಗದ ಗೌಸ್ ಮೊಹಮದ್ ಕಾಲೋನಿ ನಿವಾಸಿಗಳಾದ ದೇವೇಂದ್ರಪ್ಪ ಹಾಗೂ ಚಂದ್ರಕಲಾ ಸಾವಿನಿಂದಾಗಿ ಅವರ ಮಗುವಿಗೆ ದಿಕ್ಕು ತೋಚದಂತಾಗಿದೆ. ಸದ್ಯ ಈ ಮಗು ಅಜ್ಜ, ಅಜ್ಜಿ ಹಾಗೂ ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆಯುತ್ತಿದೆ.