ಮೈಸೂರು: ಕೇರಳದ ವೈನಾಡು ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿದೆ. ಭಾರೀ ಮಳೆ ಹಿನ್ನೆಲೆ ಮೈಸೂರಿನ ಕಪಿಲಾ ನದಿ ಮೈದುಂಬಿ ಹರಿಯುತ್ತಿದೆ.
ಮಳೆಯ ಪರಿಣಾಮ ಹೆಚ್.ಡಿ ಕೋಟೆಯ ಕಬಿನಿ ಜಲಾಶಯ ಬಹುಬೇಗ ಭರ್ತಿಯಾಗಿದೆ. ಜಲಾಶಯದ ಭದ್ರತಾ ದೃಷ್ಟಿಯಿಂದ ಹೊರಹರಿವು ಹೆಚ್ಚಿಸಲಾಗುತ್ತಿದ್ದು, ಪರಿಣಾಮ ಕಪಿಲಾ ನದಿ ಮೈದುಂಬಿ ಹರಿಯುತ್ತಿದೆ.
ಈಗಾಗಲೇ ನಂಜನಗೂಡಿನ ಶ್ರೀನಂಜುಂಡೇಶ್ವರಸ್ವಾಮಿಯ ಸ್ನಾನ ಘಟ್ಟದಲ್ಲಿನ 16 ಕಾಲು ಮಂಟಪಗಳು ಮುಳುಗಡೆಯ ಹಂತಕ್ಕೆ ಬಂದಿವೆ. ಸ್ನಾನಘಟ್ಟದ ಮೆಟ್ಟಿಲುಗಳು ಬಹುತೇಕ ಮುಳುಗಡೆಯಾಗಿವೆ. ಹೀಗಾಗಿ ಧ್ವನಿವರ್ಧಕದ ಮೂಲಕ ನದಿ ಹತ್ತಿರ ಹೋಗದಂತೆ ಜನರಿಗೆ ಎಚ್ಚರಿಕೆ ಸಂದೇಶ ನೀಡಲಾಗುತ್ತಿದೆ.
ಕಪಿಲಾ ನದಿ ನೋಡಲು ಭಕ್ತಾದಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ನದಿ ಹತ್ತಿರ ಸುಳಿಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.



