ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ
ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಮುಖಂಡ, ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಮಾಜಿ ಸದಸ್ಯ ಅಲ್ತಾಫ್ ನವಾಜ್ ಕಿತ್ತೂರು ವಿರುದ್ಧ ಪ್ರಕರಣ ದಾಖಲಾಗಿದೆ.
ಕಸಬಾ ಪೇಟೆ ಪೊಲೀಸರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಕೇಸ್ ಬುಕ್ ಮಾಡಿದ್ದಾರೆ ಎನ್ನಲಾಗಿದೆ.
ನಿನ್ನೆ ಹಳೆ ಹುಬ್ಬಳ್ಳಿಯ ಮಸೀದಿ ಪಕ್ಕದ ಶೆಡ್ ನಲ್ಲಿ ಕಾರ್ಯಕರ್ತರ ಹಾಗೂ ಅಭಿಮಾನಿಗಳನ್ನು ಸೇರಿಸಿಕೊಂಡು ಅಲ್ತಾಫ್ ಕಿತ್ತೂರು ಅದ್ದೂರಿ ಬರ್ತಡೆ ಪಾರ್ಟಿ ಮಾಡಿದ್ದರು.
ಮುಂಜಾನೆಯಿಂದಲೇ ವಿವಿಧ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು. ಅಷ್ಟೇ ಅಲ್ಲ ಸೋಶಿಯಲ್ ಮೀಡಿಯಾದಲ್ಲೂ ಬರ್ತಡೆ ಪಾರ್ಟಿಯ ವಿಡಿಯೋ ವೈರಲ್ ಆಗಿತ್ತು. ವಿಜಯಸಾಕ್ಷಿ ವೆಬ್ ನಲ್ಲೂ ವಿಸ್ತೃತ ವರದಿ ಪ್ರಕಟವಾಗಿತ್ತು.
ಬರ್ತಡೆ ಪಾರ್ಟಿ ಸುದ್ದಿ ಬಂದಿದ್ದನ್ನು ಅರಗಿಸಿಕೊಳ್ಳದ ಅಲ್ತಾಫ್ ಸಾಹೇಬರು, ಒಂದು ವಿಡಿಯೋ ಮಾಡಿ ಅದರಲ್ಲಿ ಸುದ್ದಿ ಪ್ರಕಟಿಸಿದ ಮಾಧ್ಯಮಗಳ ವಿರುದ್ಧ ಹರಿ ಹಾಯ್ದಿದ್ದರು. ಅಷ್ಟೇ ಅಲ್ಲದೇ, ಮಾನನಷ್ಟ ಮೂಕದ್ದೆಮೆ ದಾಖಲು ಮಾಡುವ ಬೆದರಿಕೆ ಕೂಡ ಹಾಕಿದ್ದರು. ಆ ವಿಡಿಯೋ ವಿವಿಧ ಗ್ರೂಪ್ ಗಳಲ್ಲಿ ಶೇರ್ ಮಾಡಲಾಗಿತ್ತು. ಆದರೆ ಗ್ರೂಪ್ ನಲ್ಲಿದ್ದ ಜನರು ಸುಳ್ಳು ಅಂತ ಪ್ರತಿಕ್ರಿಯೆ ನೀಡಿದ್ದರು.
ಕಸಬಾ ಪೇಟೆ ಠಾಣೆಯ ಇನ್ಸ್ಪೆಕ್ಟರ್ ರತನ್ ಕುಮಾರ್ ಜಿರಗ್ಯಾಳ ಈ ಕುರಿತು ಮಾಹಿತಿ ನೀಡಿದ್ದು, ಮೊದಲಿಗೆ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ಇನ್ನೂ ಪರಿಶೀಲನೆ ನಡೆಸಲಾಗುತ್ತದೆ. ನಾವು ಬರ್ತಡೆ ಪಾರ್ಟಿ ನಡೆದಾಗ ಸ್ಥಳದಲ್ಲಿ ಇರಲಿಲ್ಲ. ಹಾಗಾಗಿ ಪರಿಶೀಲನೆ ನಡೆಸಿ ಉಳಿದವರ ಮೇಲೂ ಪ್ರಕರಣ ದಾಖಲು ಮಾಡಿಕೊಳ್ಳುವ ಬಗ್ಗೆ ಆಲೋಚನೆ ಮಾಡಲಾಗುವುದು ಎಂದರು.