ವಿಜಯಸಾಕ್ಷಿ ಸುದ್ದಿ, ಮಂಗಳೂರು
ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದ ತಂದೆಯ ಅಂತ್ಯಕ್ರಿಯೆ ನೋಡಿದ ಮಗನಿಗೆ ಹೃದಯಘಾತವಾಗಿ ಮೃತಪಟ್ಟ ಘಟನೆ ಸಮೀಪದ ಬಂಟ್ವಾಳದಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪುಣಚ ಗ್ರಾಮದ ಬೈಲಗುತ್ತು ಗ್ರಾಮದ ನಿವಾಸಿ ಭುಜಂಗ ಶೆಟ್ಟಿ (85) ಕೊರೊನಾಗೆ ಬಲಿಯಾಗಿದ್ದರು. ಹೀಗಾಗಿ ಇಂದು ಅವರ ಅಂತ್ಯ ಸಂಸ್ಕಾರ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ತಂದೆಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದ ಮಗ ಶೈಲೇಶ್ ಶೆಟ್ಟಿ(44 ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ದಾರಿ ಮಧ್ಯೆ ಅಸುನೀಗಿದ್ದಾರೆ.
ಶೈಲೇಶ್ ಅವರು ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು. ಇವರ ಮನೆಯಲ್ಲಿ ಭುಜಂಗ ಶೆಟ್ಟಿ ಅವರ ಪತ್ನಿ ಹೊರತು ಪಡಿಸಿದರೆ ಎಲ್ಲರಿಗೂ ಸೋಂಕು ತಗುಲಿತ್ತು. ಆದರೆ, ಶೈಲೇಶ್ ಶೆಟ್ಟಿ ಬೇರೆ ಮನೆಯಲ್ಲಿ ವಾಸಿಸುತ್ತಿದ್ದರು. ಹೀಗಾಗಿ ಅವರಲ್ಲಿ ಸೋಂಕು ಕಾಣಿಸಿಕೊಂಡಿರಲಿಲ್ಲ. ಆದರೆ, ತಂದೆಯ ಅಂತ್ಯಕ್ರಿಯೆ ನೋಡಿ, ಹೃದಯಾಘಾತವಾಗಿದೆ. ಹೀಗಾಗಿ ಅವರು ಕೂಡ ತಂದೆಯೊಂದಿಗೆ ಇಹಲೋಕ ತ್ಯಜಿಸಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.