ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು
ಮಕ್ಕಳ ತಜ್ಞ ವೈದ್ಯ ಡಾ. ದೀಪಕ್ ಅವರ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಿ ತರೀಕೆರೆಯಲ್ಲಿ ಇಂದಿನಿಂದ ಜೂನ್ 6 ರ ವರೆಗೆ ಖಾಸಗಿ ಆಸ್ಪತ್ರೆ – ಕ್ಲಿನಿಕ್ ಬಂದ್ ಮಾಡಲು ವೈದ್ಯರು ನಿರ್ಧರಿಸಿದ್ದಾರೆ.
ವೈದ್ಯರ ಮೇಲಿನ ಮಾರಣಾಂತಿಕ ಹಲ್ಲೆಗೆ ಇಡೀ ವೈದ್ಯ ಲೋಕವೇ ಖಂಡಿಸಿದೆ. ಹೀಗಾಗಿ ನಗರದಲ್ಲಿನ ಖಾಸಗಿ ಆಸ್ಪತ್ರೆಗಳು ನಾಲ್ಕು ದಿನ ಸೇವೆಯಿಂದ ಹಿಂದೆ ಸರಿಯಲಿವೆ.
ಈ ಮೂಲಕ ವೈದ್ಯರ ಸಾಮೂಹಿಕ ರಕ್ಷಣೆಗೆ ಅಭಿಯಾನ ಪ್ರಾರಂಭಿಸಲಾಗಿದೆ.
ವೈದ್ಯ ಡಾ. ದೀಪಕ್ ಅವರ ಮೇಲಿನ ಹಲ್ಲೆ ಇಡೀ ವೈದ್ಯ ಸಮೂಹದ ಮೇಲೆ ನಡೆದ ದೌರ್ಜನ್ಯ ಎಂದು ವೈದ್ಯರು ಖಂಡಿಸಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಪ್ರಾಣ ಒತ್ತೆ ಇಟ್ಟು ವೈದ್ಯ ಡಾ ದೀಪಕ್ ಅವರು ಹಗಲು – ರಾತ್ರಿ ಜನರ ಸೇವೆ ಮಾಡಿದ್ದಾರೆ. ಆದರೆ, ಇಂತಹ ವೈದ್ಯರ ಜೀವ ಬಲಿಪಡೆಯುವಂತಹ ಕ್ರೌರ್ಯಕ್ಕೆ ಮುಂದಾದರೆ ಹೇಗೆ? ಇಂದು ದೀಪಕ್..ನಾಳೆ ಇನ್ನ್ಯಾರೋ? ಎಂದು ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಾಣದ ಹಂಗು ತೊರೆದು ಜನ ಸೇವೆ ಮಾಡುತ್ತಿದ್ದರೂ ವೈದ್ಯರ ರಕ್ಷಣೆ ಆಗುತ್ತಿಲ್ಲ. ಹೀಗಾಗಿ ಸರ್ಕಾರ ಕೂಡಲೇ ವೈದ್ಯರ ಬೆನ್ನಿಗೆ ನಿಲ್ಲಬೇಕು ಎಂದು ವೈದ್ಯರ ಸಂಘಟನೆಗಳು ಒತ್ತಾಯಿಸಿವೆ. ಅಲ್ಲದೇ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲು ಅಭಿಯಾನ ಶುರು ಮಾಡಿದ್ದಾರೆ. ಒಂದು ವೇಳೆ ಡಾ. ದೀಪಕ್ ಅವರ ಮೇಲಿನ ಹಲ್ಲೆಗೆ ನ್ಯಾಯಾ ಸಿಗದಿದ್ದರೆ, ಬೆಂಗಳೂರಿನಲ್ಲಿಯೂ ವೈದ್ಯಕೀಯ ಸೇವೆ ಸ್ಥಗಿತ ಮಾಡಲು ವೈದ್ಯರ ಸಂಘಟನೆಗಳು ಚಿಂತನೆ ನಡೆಸಿವೆ.